ಸ್ಪಷ್ಟ ಗುರಿಯೊಂದಿಗೆ ವರ್ತಿಸಿದಲ್ಲಿ ಉತ್ತಮ ನಾಯಕನಾಗಲು ಸಾಧ್ಯ

ಲೋಕಬಂಧು ನ್ಯೂಸ್, ಉಡುಪಿ
ಸ್ಪಷ್ಟ ಗುರಿಯೊಂದಿಗೆ ಕಾರ್ಯನಿರ್ವಹಿಸಿದಲ್ಲಿ ಉತ್ತಮ ನಾಯಕನಾಗಿ ಮೂಡಿಬರಲು ಸಾಧ್ಯವಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಲೋಬೊ ಹೇಳಿದರು.ನಗರದ ಕಕ್ಕುಂಜೆ ಅನುಗ್ರಹ ಪಾಲನ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸುವಿಚಾರ ರಾಜಕೀಯ ಸಮಿತಿ, ಶ್ರೀಸಾಮಾನ್ಯರ ಆಯೋಗ ಹಾಗೂ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಸಂಯುಕ್ತಾಶ್ರಯದಲ್ಲಿ ಭಾನುವಾರ ಕ್ರೈಸ್ತ ಸಮುದಾಯದ ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರ ಸಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕ್ರೈಸ್ತ ಸಮುದಾಯ ತನ್ನದೇ ಆದ ಶಕ್ತಿ ಹೊಂದಿದ್ದು ಅದನ್ನು ಸಮುದಾಯದಲ್ಲಿ ಒತ್ತಡ ತರುವ ಮೂಲಕ ಉತ್ತಮ ನಾಯಕರನ್ನು ರೂಪಿಸುವ ಅಗತ್ಯವಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಮುದಾಯದ ಶಕ್ತಿಯನ್ನು ನಾಯಕತ್ವದ ಮೂಲಕ ತೋರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಸುವ ಅಗತ್ಯವಿದೆ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ವೆರೋನಿಕಾ ಕರ್ನೇಲಿಯೊ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುವಾಗ ಜನರು ತೋರುವ ಪ್ರೀತಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಉತ್ಸಾಹ ನೀಡುತ್ತದೆ ಎಂದರು.


ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್ ಮಾತನಾಡಿ, ಸಮಾಜದಲ್ಲಿ ಸಂಘಟಿತರಾಗಿ ಕೆಲಸ ಮಾಡಿದಾಗ ಜನರೇ ನಮ್ಮನ್ನು ಗುರುತಿಸುತ್ತಾರೆ. ಸಮಾಜದ ಜನರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಿದಾಗ ನೈಜ ನಾಯಕರಾಗಿ ಮೂಡಿಬರಲು ಸಾಧ್ಯ ಎಂದರು.


ರಾಜಕೀಯ ಸೇವೆ ಕುರಿತು ಸೀಮಾ ಮಾರ್ಗರೇಟ್ ಡಿ'ಸೋಜಾ, ಜುಡಿತ್ ಮೆಂಡೊನ್ಸಾ ಮತ್ತು ರೋಶನಿ ಒಲಿವೆರಾ ಅನುಭವ ಹಂಚಿಕೊಂಡರು.


ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಡಿ'ಆಲ್ಮೆಡ ಅಧ್ಯಕ್ಷತೆ ವಹಿಸಿದ್ದರು.


ಮುಂದಿನ ವರ್ಷದ ಕಾರ್ಯ ಯೋಜನೆಯನ್ನು ಶ್ರೀಸಾಮಾನ್ಯ ಆಯೋಗದ ಸಂಚಾಲಕ ಡಾ.ಜೆರಾಲ್ಡ್ ಪಿಂಟೊ ಮಂಡಿಸಿದರು. ಜೋಕಿಂ ಪಿಂಟೊ ಸಂವಾದ ನಡೆಸಿಕೊಟ್ಟರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಯೋಜಿತ ಅಧ್ಯಕ್ಷ ಲೂಯಿಸ್ ಡಿ'ಸೋಜ, ಸುವಿಚಾರ ಚಿಂತನ ಮಂಥನ ಸಮಿತಿ ಉಪಾಧ್ಯಕ್ಷೆ ಮೇರಿ ಡಿ'ಸೋಜ, ಪ್ರಧಾನ ಕಾರ್ಯದರ್ಶಿ ಗಳಾದ ಮೈಕಲ್ ರೊಡ್ರಿಗಸ್ ಹಾಗೂ ಮೇಬಲ್ ಡಿ'ಸೋಜಾ ಇದ್ದರು.


ರಾಜಕೀಯ ಸಮಿತಿ ಸಂಚಾಲಕ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ಜೆರಾಲ್ಡ್ ಪಿಂಟೊ ವಂದಿಸಿದರು. ಶಾಂತಿ ಪಿರೇರ ನಿರೂಪಿಸಿದರು.