ಪಲ್ಟಿಯಾದ ಟ್ಯಾಂಕರ್‌ನಿಂದ ಅನಿಲ ಸೋರಿಕೆ- ವಾಹನ ಸಂಚಾರ ಮಾರ್ಗ ಬದಲು

ಲೋಕಬಂಧು ನ್ಯೂಸ್ | ಉಡುಪಿ, ಮಾ.16
ನಗರದ ಹೊರವಲಯದ ಕಟಪಾಡಿ ಬಳಿ ಮಂಗಳೂರು- ಉಡುಪಿ ಮಾರ್ಗದಲ್ಲಿ ಹಿಂದುಸ್ಥಾನ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮಧ್ಯ ರಸ್ತೆಯಲ್ಲಿ ಬಿದ್ದಿದ್ದು, ಟ್ಯಾಂಕರ್‌ನಿಂದ  ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ರಾತ್ರಿ 8 ಗಂಟೆ ವರೆಗೆ ವಾಹನ ಸಂಚಾರ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅದೇಶಿಸಿದ್ದಾರೆ.
ಮಂಗಳೂರಿನಿಂದ ಉಡುಪಿಗೆ ಹೋಗುವ ವಾಹನಗಳು ಕಾಪುನಿಂದ ಶಿರ್ವ -ಮೂಡುಬೆಳ್ಳೆ- ಮಣಿಪುರ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ಹೋಗಬೇಕು. ಪಡುಬಿದ್ರೆ- ಬೆಳ್ಮಣ್- ಶಿರ್ವ ಮಾರ್ಗವಾಗಿ ಮಣಿಪಾಲಕ್ಕೆ ತೆರಳಿ ಅಲ್ಲಿಂದ ಉಡುಪಿಗೆ ತಲುಪಬೇಕು.


ಉಡುಪಿಯಿಂದ ಮಂಗಳೂರಿಗೆ ಹೋಗುವ ವಾಹನಗಳು ಮಣಿಪಾಲದಿಂದ ಮಣಿಪುರ- ಮೂಡುಬೆಳ್ಳೆ- ಶಿರ್ವ ಮಾರ್ಗವಾಗಿ ಕಾಪು ತಲುಪಿ ಅಲ್ಲಿಂದ ಮಂಗಳೂರು ಕಡೆಗೆ ತೆರಳಬೇಕು. ಮಣಿಪಾಲದಿಂದ ಶಿರ್ವ- ಬೆಳ್ಮಣ್ ಮಾರ್ಗವಾಗಿ ಪಡುಬಿದ್ರಿ ತಲುಪಿ ಅಲ್ಲಿಂದ ಮಂಗಳೂರು ಕಡೆಗೆ ಸಂಚರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.