ಲೋಕಬಂಧು ನ್ಯೂಸ್ | ಉಡುಪಿ, ಮಾ.14
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಗಂಧ-ಗಾಳಿಯಿಲ್ಲದ ಬೊಗಳೆ ಬಜೆಟ್ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಯನ್ನು ಸಂಪೂರ್ಣ ಹೊರಗಿಟ್ಟು, ಜಿಲ್ಲೆಯ ನಿರಂತರ ಕಡೆಗಣನೆ ಮಾಡಿರುವುದಾಗಿ ಆರೋಪಿಸಿ ಉಡುಪಿ ನಗರ ಬಿಜೆಪಿ ವತಿಯಿಂದ ಶನಿವಾರ ನಗರದ ಆದರ್ಶ ಆಸ್ಪತ್ರೆ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ರಾಜ್ಯ ಸರಕಾರ ಗ್ಯಾರಂಟಿಗಳನ್ನು ನೀಡುವುದೇ ಅಭಿವೃದ್ಧಿ ಎಂದು ಹೇಳಹೊರಟಿದೆ. ಜಿಲ್ಲೆಯ ಐದು ಮಂದಿ ಶಾಸಕರು ಹಲವಾರು ಬಾರಿ ಜಿಲ್ಲಾಡಳಿತವನ್ನು ಅಭಿವೃದ್ಧಿ ವಿಚಾರದಲ್ಲಿ ಎಚ್ಚರಿಸಿದ್ದರೂ ಯಾವುದೇ ಯೋಜನೆಗಳಿಗೆ ಸರಕಾರ ಅನುದಾನ ನೀಡುತ್ತಿಲ್ಲ. ಜಿಲ್ಲೆಯ ಸಮಸ್ಯೆಗಳಿಗೂ ಸ್ಪಂದನೆ ನೀಡದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ 10 ಸಾವಿರ ರೂ.ಗೆ ಸಿಗುತ್ತಿದ್ದ ಮರಳಿನ ದರ ಇಂದು ವಿಪರೀತ ಏರಿಕೆಯಾಗಿದೆ. 25 ರೂ.ಗೆ ಸಿಗುತ್ತಿದ್ದ ಕೆಂಪುಕಲ್ಲಿನ ದರ 50 ರೂ. ಆಗಲು ಕಾಂಗ್ರೆಸ್ ಸರಕಾರವೇ ನೇರ ಕಾರಣ. ಇಂಥ ಕೆಟ್ಟ ವಾತಾವರಣದ ಆಡಳಿತವನ್ನು ಕರಾವಳಿಯ ಜನತೆ ಎಂದೂ ಕಂಡಿಲ್ಲ ಎಂದರು.
ಬಡವರಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರತೀ ಗ್ರಾಮ ಪಂಚಾಯತ್'ಗಳಿಗೆ 50 ಮನೆಗಳು ಸಿಗುತ್ತಿದ್ದವು. ಆದರೆ, ಈ ಸರಕಾರದಲ್ಲಿ ಕನಿಷ್ಟ ಒಂದು ಮನೆಯೂ ಸಿಗುತ್ತಿಲ್ಲ 9/11 ಸಮಸ್ಯೆ, ಪ್ರಾಧಿಕಾರದ ಸಮಸ್ಯೆ, ಕನ್ವರ್ಷನ್ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳು ಪರಿಹಾರ ಕಂಡಿಲ್ಲ. ಇಷ್ಟೊಂದು ಸಮಸ್ಯೆಗಳಿದ್ದರೂ ಅದನ್ನು ಪರಿಹಾರ ಮಾಡಬೇಕೆಂಬ ಕನಿಷ್ಟ ಜವಾಬ್ದಾರಿಯೂ ಈ ಸರಕಾರಕ್ಕೆ ಇಲ್ಲ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ.
ಉಡುಪಿ ಪರ್ಯಾಯಕ್ಕೆ ರಾಜ್ಯ ಸರಕಾರಕ್ಕೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರದ್ದು ಅಭಿವೃದ್ಧಿಗೆ ಅನುದಾನವೇ ನೀಡದ ಚೊಂಬು ಸರಕಾರ ಎಂದು ಕಿಡಿಕಾರಿದರು. ಮುಂಬರುವ ಚುನಾವಣೆಗಳಲ್ಲಿ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಜನರ ಮುಂದಿಡುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಸಿದ್ದರಾಮಯ್ಯ ಕರಾವಳಿಯ ಮಟ್ಟಿಗೆ ದ್ವೇಷ ರಾಜಕೀಯ ಮಾಡುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಸಿದ್ದರಾಮಯ್ಯ ಕುರ್ಚಿಗಾಗಿ ಪೈಪೋಟಿ ನಡೆಸುವುದರಲ್ಲೇ ಮಗ್ನರಾಗಿದ್ದಾರೆ. ಸಾಲ ಮಾಡಿದ್ದು ಬಿಟ್ಟರೆ ಬಜೆಟ್‌ನಲ್ಲಿ ಕರಾವಳಿಯ ಅಭಿವೃದ್ಧಿಗೆ ಯಾವುದೇ ರೀತಿಯ ಅನುದಾನ ನೀಡಿಲ್ಲ. ಹಿಂದೆ ಬಿಜೆಪಿ ಸರಕಾರಗಳಿದ್ದಾಗ ಕರಾವಳಿ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಟ್ಟರೆ ಕಾಂಗ್ರೆಸ್ ಸರಕಾರ ಕನಿಷ್ಟ 5 ಶೇ. ಅನುದಾನವನ್ನೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ನೀಡಿಲ್ಲ.
ಇರಾನ್ ಯುದ್ದದ ಸಂದರ್ಭದಲ್ಲಿ ಗ್ಯಾಸ್ ಬೆಲೆ ಏರಿಕೆಯಾಗಿರುವುದಕ್ಕೆ ಉಡುಪಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಉಡುಪಿ ಜಿಲ್ಲೆಯ ಕಾಂಗ್ರೆಸಿಗರಿಗೆ ಯಾವ ವಿಚಾರಕ್ಕೆ ಪ್ರತಿಭಟನೆ ನಡೆಸಬೇಕು ಎಂಬ ಕನಿಷ್ಟ ಜ್ಞಾನ ಕೂಡಾ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಮುಖಂಡರಾದ ಕೆ. ಉದಯ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಕಿರಣ್ ಕುಮಾರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಮೊದಲಾದವರಿದ್ದರು.
