ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

ಲೋಕಬಂಧು ನ್ಯೂಸ್ | ಉಡುಪಿ, ಮಾ.14
ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ  ಅಭಿವೃದ್ಧಿಪಡಿಸಲಾಗುವ ಮುಖ್ಯ ರಸ್ತೆ ಕಾಮಗಾರಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಣಿಪಾಲ ಕೈಗಾರಿಕಾ ಪ್ರದೇಶದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳು ಹಾಗೂ ದಿನಂಪ್ರತಿ ಸಂಚರಿಸುವ ಸಾರ್ವಜನಿಕರ ತೀವ್ರ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ  ಉಡುಪಿ ನಗರಸಭೆ ಮೂಲಕ 40 ಲಕ್ಷ ರೂ. ಅನುದಾನ ಹಾಗೂ ಸ್ಥಳೀಯ ಕಂಪನಿಗಳ ಸಿಎಸ್ಆರ್ ನಿಧಿ ಮೂಲಕ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ.


ರಸ್ತೆ ಅಭಿವೃದ್ಧಿಗೆ ಸರ್ಕಾರದ ಅನುದಾನದ ಕೊರತೆ ಉಂಟಾದಾಗ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಿ ಸ್ಥಳೀಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದಾಗ ಈ ಕಾಮಗಾರಿಗೆ ತಮ್ಮ  ಸಿಎಸ್ಆರ್ ನಿಧಿಯಿಂದ ಗರಿಷ್ಠ ಮೊತ್ತ ನೀಡುವ ಮೂಲಕ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿಗೆ ಕೈಜೋಡಿಸಿ ವಿಶೇಷ ಸಹಕಾರ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಮಟ್ಟಾರು ವಸಂತ ಕಿಣಿ ಕೈಗಾರಿಕಾ ಪ್ರದೇಶದ ಬಹುದಿನದ ಬೇಡಿಕೆಯಾಗಿದ್ದ ರಸ್ತೆ  ಕಾಮಗಾರಿ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಶಾಸಕ ಯಶಪಾಲ್ ಸುವರ್ಣ ಅವರಿಗೆ ಅಭಿನಂದನೆ ಸಲ್ಲಿಸಿ, ಕಾಮಗಾರಿ ಶೀಘ್ರ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಆಶಿಸಿದರು.


ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಕಲ್ಪನಾ ಸುಧಾಮ, ನರಸಿಂಹ ನಾಯಕ್, ಟಿ.ಜಿ. ಹೆಗ್ಡೆ ಮತ್ತು ಹರೀಶ್ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕೆ  ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಭಟ್, ಚಿತ್ತರಂಜನ್ ಭಟ್ ಮತ್ತು ವಲ್ಲಭ ಭಟ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಕೃಷ್ಣ ಕುಲಾಲ್, ಸದಾನಂದ ಪ್ರಭು, ನಿತಿನ್ ಪೈ, ಪೃಥ್ವಿರಾಜ್ ಹಾಗೂ ವಿವಿಧ ಕಂಪನಿಗಳ ಪ್ರಮುಖರು ಇದ್ದರು.