ಲೋಕಬಂಧು ನ್ಯೂಸ್ | ಉಡುಪಿ, ಮಾ.16
ಸಾಂಸ್ಕೃತಿಕ ಪ್ರಜ್ಞೆ ಸಮಾಜದಲ್ಲಿ ಮೂಡಿಸಬೇಕು. ಕಲೆಗಳ ಅನುಸಂಧಾನ ಆಗಬೇಕು. ಹವ್ಯಾಸಿ ರಂಗಭೂಮಿ ಮತ್ತಷ್ಟು ಸಕ್ರಿಯವಾಗಲು ಕರಾವಳಿ ರಂಗಾಯಣದ ಅಗತ್ಯವಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಪ್ರತಿಪಾದಿಸಿದರು.
ಉಡುಪಿ ರಥಬೀದಿ ಗೆಳೆಯರು ವತಿಯಿಂದ ಡಾ.ನಿ.ಮುರಾರಿ ಬಲ್ಲಾಳ್ ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಮುರಾರಿ ಕೆದ್ಲಾಯ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ತಳಹದಿಯಲ್ಲಿ ವೈಚಾರಿಕ ಚಿಂತನೆ ಮೂಲಕ ಆಧ್ಯಾತ್ಮಿಕ ಹುಡುಕಾಟ ನಡೆಯಬೇಕು. ಅಂಬೇಡ್ಕರ್ ಚಿಂತನೆ ಈ ಕಾಲದ ಅಗತ್ಯ ಮತ್ತು ತುರ್ತು ಆಗಿದೆ. ಹೊಸಬರು ರಂಗಭೂಮಿ ಕಡೆಗೆ ಹೆಚ್ಚು ಹೆಚ್ಚು ಬರಬೇಕು ಎಂದವರು ಆಶಿಸಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ ಕಲೆ ಭಾಷೆ, ಸಂಸ್ಕತಿ, ಜೀವನ ಮೌಲ್ಯದ ಸಾರ. ವೈಚಾರಿಕ ನೆಲೆಯಲ್ಲಿ ಚಿಂತನೆ ಮೂಡಿಸುವ ರಂಗ ಚಟುವಟಿಕೆಗೆ ಮಹತ್ವ ಸಿಗಬೇಕು ಎಂದರು.
ವೇದಿಕೆಯಲ್ಲಿ ರಥಬೀದಿ ಗೆಳೆಯರು ಅಧ್ಯಕ್ಷ ನಾಗೇಶ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ, ಎಂಜಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಇದ್ದರು.
ಕೋಶಾಧಿಕಾರಿ ವೇದವ್ಯಾಸ ಭಟ್ ಅವರು ಮುರಾರಿ ಮತ್ತು ಕೆದ್ಲಾಯ ಅವರ ಸಂಸ್ಮರಣೆ ಮಾಡಿದರು.
ಜ್ಯೋತಿ ರಂಗ ಗೀತೆ ಹಾಡಿದರು. ರಥಬೀದಿ ಗೆಳೆಯರು ಸಂಸ್ಥೆ ಉಪಾಧ್ಯಕ್ಷ ಸಂತೋಷ್ ಬಲ್ಲಾಳ್ ಸ್ವಾಗತಿಸಿದರು. ಉಪಾಧ್ಯಕ್ಷ ಡಾ.ಯು.ಸಿ. ನಿರಂಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮೈಸೂರು ರಂಗಾಯಣದಿಂದ 'ಅಂಬೇಡ್ಕರ್ ಕೊಲಾಜ್' ನಾಟಕ ಪ್ರದರ್ಶನ ನಡೆಯಿತು.
