ಪಂಚ ರಾಜ್ಯಗಳ ಚುನಾವಣೆ ನಿಗದಿ

ಲೋಕಬಂಧು ನ್ಯೂಸ್ ನವದೆಹಲಿ, ಮಾ.15
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್‌ ಮಾಡಿದೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌, ಪಂಚ ರಾಜ್ಯಗಳ ಚುನಾವಣೆ ಮಾಹಿತಿ ನೀಡಿದರು.


ಅಸ್ಸಾಂ, ಕೇರಳ ಮತ್ತು ಪುದುಚೆರಿಯಲ್ಲಿ ಒಂದೇ ಹಂತದಲ್ಲಿ ಏಪ್ರಿಲ್‌ 9ರಂದು ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಏಪ್ರಿಲ್‌ 23 ಮತ್ತು 29 ಮತದಾನ ನಡೆಯಲಿದೆ. ತಮಿಳುನಾಡು ರಾಜ್ಯದ ವಿಧಾನಸಭಾ ಚುನಾವಣೆಗೆ ಎಪ್ರಿಲ್‌ 23ರಂದು ಮತದಾನ ನಡೆಯಲಿದೆ. ಎಲ್ಲ ಚುನಾವಣೆಗಳ ಫಲಿತಾಂಶ ಮೇ 4 ರಂದು ಪ್ರಕಟವಾಗಲಿದೆ ಎಂದರು

ಕರ್ನಾಟಕ ರಾಜ್ಯದ ಎರಡು ಕ್ಷೇತ್ರಗಳಿಗೆ ಎಪ್ರಿಲ್‌ 9ರಂದು ಉಪ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಮೇ 4 ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 6.44 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 5.67 ಕೋಟಿ ಮತದಾರರಿದ್ದಾರೆ. ಕೇರಳ 140 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಾಗಲಿದ್ದು, 2.70 ಕೋಟಿ ಮತದಾರರು ಭವಿಷ್ಯ ಬರೆಯಲಿದ್ದಾರೆ. ಇನ್ನು ಅಸ್ಸಾಂ 126 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 2.50 ಕೋಟಿ ಮತದಾರರಿದ್ದಾರೆ. ಪುದುಚೆರೆಯಲ್ಲಿ 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 9.44 ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಅವರು ತಿಳಿಸಿದರು.

ಒಟ್ಟು ಮತದಾರರ ಸಂಖ್ಯೆ
ಪುದುಚೆರಿ 9.44 ಲಕ್ಷ
ಅಸ್ಸಾಂ 2.50 ಕೋಟಿ
ಕೇರಳ 2.70 ಕೋಟಿ
ತಮಿಳುನಾಡು 5.67 ಕೋಟಿ
ಪಶ್ಚಿಮ ಬಂಗಾಳ 6.44 ಕೋಟಿ