ಲೋಕಬಂಧು ನ್ಯೂಸ್, ಉಡುಪಿ
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏಕಾಏಕಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಂಯುಕ್ತವಾಗಿ ಬ್ರಹ್ಮಗಿರಿ ವೃತ್ತ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿತು.ರಸ್ತೆ ಮಧ್ಯೆ ಕಟ್ಟಿಗೆ (ಸೌದೆ) ಒಲೆ ಉರಿಸಿ ಚಹಾ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ. ಗಫೂರ್ ಮಾತನಾಡಿ, ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಹಿಳೆಯರ ಮೇಲೆ ಪ್ರಹಾರ ಮಾಡಿದೆ. ಹೋಟೆಲ್ ಉದ್ದಿಮೆಗೂ ಹೊಡೆತ ಬಿದ್ದಿದೆ. ಹಾಗಾಗಿ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಮುಂದಾಳು ವೆರೊನಿಕಾ ಕರ್ನೇಲಿಯೊ ಮಾತನಾಡಿ, ಬಿಜೆಪಿ ಸರ್ಕಾರ ಕಚ್ಛಾತೈಲ (ಕ್ರೂಡ್ ಆಯಿಲ್) ಬೆಲೆ ಏರಿಕೆಯಾಗದೆ ಇದ್ದರೂ ಬೆಲೆ ಏರಿಸಲಾಗಿದೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿದರೆ ಕೇಂದ್ರ ಸರ್ಕಾರ ಟ್ಯಾಕ್ಸ್, ಜಿಎಸ್‌ಟಿ ಹಾಕುವ ಮೂಲಕ ಜನರಿಗೆ ಹೊರೆ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲೆವೂರು ಹರೀಶ್ ಕಿಣಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಹಿಳಾ ಕಾಂಗ್ರೆಸ್ ಮುಂದಾಳು ಜ್ಯೋತಿ ಹೆಬ್ಬಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.