`ಸಮಾಧಾನ ಮಹೋತ್ಸವ'ಕ್ಕೆ ಹಿಂಜಾವೇ ಅಸಮಾಧಾನ

ಲೋಕಬಂಧು ನ್ಯೂಸ್ | ಉಡುಪಿ, ಮಾ.16
ನಗರದ ಮಿಷನ್ ಕಂಪೌಂಡ್ ಪರಿಸರದಲ್ಲಿ ಮಾ. 20ರಿಂದ ಮೂರು ದಿನಗಳ ಕಾಲ ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ಆಯೋಜಿಸಲಾಗಿರುವ 'ಸಮಾಧಾನ ಮಹೋತ್ಸವ' ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ ಶೆಟ್ಟಿ ಕಾರ್ಕಳ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋಹನ್ ಸಿ. ಲಾಝರಸ್ ಈ ಹಿಂದೆ ಹಿಂದೂ ದೇವಾಲಯಗಳನ್ನು 'ಸೈತಾನನ ನೆಲೆಗಳು' ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಆ ಸಂಬಂಧ ತಮಿಳುನಾಡಿನ ಹಲವು ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ.


ಲಾಝರಸ್ ಅವರ 'ಜೀಸಸ್ ರಿಡೀಮ್ಸ್' ಸಂಸ್ಥೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ವಿದೇಶಿ ಹಣವನ್ನು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ 2024ರ ಮಾರ್ಚ್‌ನಲ್ಲಿ ಸಂಸ್ಥೆಯ ಪರವಾನಿಗೆ ಅಮಾನತುಗೊಳಿಸಿದೆ ಎಂಬುದನ್ನೂ ಶ್ರೀಕಾಂತ ಶೆಟ್ಟಿ ಉಲ್ಲೇಖಿಸಿದರು.


'ಸಮಾಧಾನ ಮಹೋತ್ಸವ' ಹೆಸರಿನಲ್ಲಿ ಬಲಾತ್ಕಾರವಾಗಿ ಮತಾಂತರ ಮಾಡುವ ಷಡ್ಯಂತ್ರ ಇದಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿ ಕಾರ್ಯಕ್ರಮವನ್ನು ತಕ್ಷಣ ರದ್ದುಗೊಳಿಸುವಂತೆ ಆಗ್ರಹಿಸಲಾಗಿದೆ.


ಬಹಿರಂಗವಾಗಿ ಮೌಢ್ಯ ಬಿತ್ತುವ ಕೆಲಸಗಳಿಗೆ ಅವಕಾಶ ಕೊಡಬಾರದು. ಜಿಲ್ಲೆಯಲ್ಲಿ ಶಾಂತಿ ನೆಮ್ಮದಿಗೆ ಭಂಗ ತರುವ ಕೆಲಸವನ್ನು ಸಂಘಟಕರು ಕೈಬಿಡಬೇಕು. ಜಿಲ್ಲೆಯ ಸಂಸ್ಕೃತಿ, ಸಭ್ಯತೆಗೆ ಭಂಗ ತರುವ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅವಕಾಶ ಕೊಡಬಾರದು. ಆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಸುದ್ದಿಗೋಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ವಿಜಯ್ ಕೊಡವೂರು, ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ರಾಜೇಶ್ ಉಚ್ಚಿಲ ಮೊದಲಾದವರಿದ್ದರು.