ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್.ಪಿ.ವಿ ಲಸಿಕೆ ಅಭಿಯಾನ ಪ್ರಮುಖ ಮೈಲಿಗಲ್ಲು

ಲೋಕಬಂಧು ನ್ಯೂಸ್ | ಉಡುಪಿ, ಮಾ.15
ಆರೋಗ್ಯವಂತ ರಾಷ್ಟ್ರದ ಉದಯ ಆರೋಗ್ಯವಂತ ಮಹಿಳೆಯರಿಂದ ಆರಂಭವಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್.ಪಿ.ವಿ ಲಸಿಕೆ ಸಹಕಾರಿಯಾಗಿದ್ದು, ಹೆಣ್ಣು ಮಕ್ಕಳ ಸದೃಢ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಈ ಲಸಿಕೆ ಅಭಿಯಾನ ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಬ್ರಹ್ಮಗಿರಿ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಂಯುಕ್ತ ಆಶ್ರಯದಲ್ಲಿ ನಡೆದ ಎಚ್.ಪಿ.ವಿ ಲಸಿಕೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಹ್ಯೂಮನ್ ಪ್ಯಾಪಿಲೋಮ ವೈರಸ್, ಗರ್ಭಕಂಠ ಸೇರಿದಂತೆ ಅನೇಕ ಮಾದರಿಯ ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಎಚ್.ಪಿ.ವಿ. ಲಸಿಕೆ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಲಸಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಿರುವುದಾಗಿ ತಿಳಿಸಿದರು.
ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಎಚ್.ಪಿ.ವಿ. ಲಸಿಕೆಯನ್ನು 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ 1.15 ಕೋಟಿ ವಿದ್ಯಾರ್ಥಿನಿಯರಿಗೆ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಸುಮಾರು 6,89,620 ಅರ್ಹರನ್ನು ಗುರುತಿಸಲಾಗಿದೆ. ಈಗಾಗಲೇ 2.54 ಲಕ್ಷ ಲಸಿಕೆಗಳನ್ನು ಆಯಾಯ ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 11,274 ಮಕ್ಕಳನ್ನು ಗುರುತಿಸಲಾಗಿದ್ದು, 4,150 ಲಸಿಕೆಗಳು ಈಗಾಗಲೇ ಸರಬರಾಜಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲಸಿಕೆ ಲಭ್ಯವಾಗಲಿದೆ ಎಂದರು.


ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಲಸಿಕೆಯೊಂದೇ ಸಹಕಾರಿಯಾಗಿದ್ದು, ಲಸಿಕೆ ಪಡೆದ ಅರ್ಹರು ಸುರಕ್ಷಿತರಾಗಿದ್ದಾರೆ. ಅದರಿಂದ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಸಂಭವಿಸುವುದಿಲ್ಲ ಹಾಗೂ ಅಡ್ಡಪರಿಣಾಮಗಳಿಲ್ಲ ಎಂಬ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯುವದರಿಂದ ಆಗುವ ಪ್ರಯೋಜನದ ಕುರಿತು ಜನಸಾಮಾನ್ಯರು ಸಮುದಾಯಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದರೊಂದಿಗೆ ಹದಿಹರೆಯದ ಬಾಲಕಿಯರ ಆರೋಗ್ಯ ರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದರು. ಎಚ್.ಪಿ.ವಿ. ಲಸಿಕೆ ಪಡೆದ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳೂ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು ಎಂದರು.


ಹೆಣ್ಣು ಮಕ್ಕಳು ಆರೋಗ್ಯ ಪೂರ್ಣ ಬದುಕು ಸಾಗಿಸಲು ಪ್ರತಿಯೊಬ್ಬರೂ ಅವಕಾಶ ಮಾಡಿಕೊಡಬೇಕು. ಲಸಿಕೆ ಅಭಿಯಾನ ಅರ್ಥಪೂರ್ಣವಾಗಿ ಅರ್ಹರಿಗೆ ತಲುಪಲು ಪೂರಕ ವಾತಾವರಣ ರೂಪುಗೊಳ್ಳುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಪ್ರತೀ ತಾಲೂಕಿನಲ್ಲಿಯೂ ಲಸಿಕೆ‌ ಕಾರ್ಯಕ್ರಮ ಕುರಿತು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಹವ್ಯಾಸ, ಪೌಷ್ಠಿಕ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ, ದೇಹದ ತೂಕದಲ್ಲಿ ಸಮತೋಲನ ಕಾಯ್ದುಕೊಂಡಲ್ಲಿ ಆರೋಗ್ಯಯುತ ಜೀವನ ನಡೆಸಬಹುದು.


ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಅಲ್ಲ. ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗಗಳ ಲಕ್ಷಣ ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಿ ಆರೋಗ್ಯವಂತ ಜೀವನ ನಡೆಸಬಹುದು. ದೇಶದಾದ್ಯಂತ ಹಮ್ಮಿಕೊಂಡಿರುವ ಎಚ್.ಪಿ.ವಿ. ಲಸಿಕೆ ಅಭಿಯಾನ ಪ್ರತೀ ಅರ್ಹರ ಮನೆ ಬಾಗಿಲಿಗೂ ತಲುಪುವುದರೊಂದಿಗೆ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.


ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಎಚ್.ಪಿ.ವಿ. ಲಸಿಕೆ ಕಾರ್ಯಕ್ರಮವನ್ನು ರಾಷ್ಟ್ರೀಯ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ ಮಾರ್ಗಸೂಚಿಯನ್ವಯ ಆಯೋಜಿಸಲಾಗುತ್ತಿದೆ. ಯೂ-ವಿನ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡ 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನೊಳಗಿನ ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆ ನೀಡಲಾಗುವುದು ಎಂದರು.


ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಜಿಲ್ಲಾ ಸರ್ಜನ್ ಡಾ. ಅಶೋಕ್ ಎಚ್.,ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಸೈಂಟ್ ಸಿಸಿಲಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಪ್ರಿಯಾ ಮರಿಯಾ‌ ಮೊದಲಾದವರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ನಿರೂಪಿಸಿ, ಚಂದ್ರಕಲಾ ವಂದಿಸಿದರು.