ಲೋಕಬಂಧು ನ್ಯೂಸ್ | ಉಡುಪಿ, ಮಾ.15
ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಸರಕಾರ ಜಾರಿಗೆ ತಂದಿರುವ ಹಕ್ಕು, ನಿಯಮ ಹಾಗೂ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರೊಂದಿಗೆ ಮಕ್ಕಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಸೂಚಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳಿಗೆ ಆರ್.ಟಿ.ಇ ಕಾಯ್ದೆ 2009, ಪೋಕ್ಸೊ ಕಾಯ್ದೆ 2012, ಬಾಲ್ಯ ವಿವಾಹ ಕಾಯ್ದೆ 2006 ಹಾಗೂ ಬಾಲನ್ಯಾಯ ಕಾಯ್ದೆ 2015 ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯ 1,59,731 ಮಕ್ಕಳಿದ್ದು ಪ್ರತಿಯೊಬ್ಬರೂ ಆಧಾರ್ ಸೀಡಿಂಗ್ ಜೊತೆಗೆ ಆಧಾರ್ ಮ್ಯಾಪಿಂಗ್ ಕೂಡಾ ಆಗಿರಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಅವರು ಸಮಸ್ಯೆ ಎದುರಿಸಬೇಕಾದೀತು. ಪ್ರತಿಯೊಂದು ಮಗುವೂ ಆಧಾರ್ ಕಾರ್ಡ್ ಹೊಂದುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಕರ್ತವ್ಯವಾಗಿದ್ದು, 30 ದಿನಗಳೊಳಗೆ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಲಭಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರಕಾರಕ್ಕೆ ವರದಿ ನೀಡಲಾಗುವುದು ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಿಗೆ ಉಚಿತ ಅನ್ನ, ಸಾಂಬಾರ್, ಚಪಾತಿ, ಮೊಟ್ಟೆ, ಬಾಳೆಹಣ್ಣು ಇತ್ಯಾದಿ ಒಳಗೊಂಡಿರುವ ಪಥ್ಯಾಹಾರ ನೀಡಬೇಕು. ಆ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಬೇಕು. ಜೊತೆಗೆ ಅಲ್ಲಿನ ವೈದ್ಯರು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ 76ಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು ಅವು ಸರಕಾರದ ಪಿ.ಸಿ.ಪಿ.ಎನ್.ಡಿ.ಟಿ ನಿಯಮನುಸಾರ ಕಾರ್ಯನಿರ್ವಹಿಸಬೇಕು. ಎರಡು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿದಾಗ ಕೆಲವು ನಿಯಮಗಳನ್ನು ಪಾಲಿಸದೇ, ದಾಖಲೆಗಳನ್ನೂ ನಿರ್ವಹಿಸದೆ ಇರುವುದು ಕಂಡುಬಂದಿದೆ. ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಸೂಕ್ತ ದಾಖಲೆ ನಿರ್ವಹಿಸುತ್ತಿರುವ ಬಗ್ಗೆ ಎರಡು ವಾರದಲ್ಲಿ ಪರಿಶೀಲಿಸಿ ಆಯೋಗಕ್ಕೆ ವರದಿ ನೀಡಲು ಸೂಚಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಮತ್ತಿತರ ಸೌಲಭ್ಯ ನೀಡಲು ಅನುಕೂಲವಾಗುವಂತೆ ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ ನಡೆಸುವುದರೊಂದಿಗೆ ಏಕ ಪೋಷಕರು, ಅವಕಾಶ ವಂಚಿತರು, ಶಾಲೆಯಿಂದ ಹೊರಗುಳಿದವರು, ಲಸಿಕೆ ವಂಚಿತ ಮಕ್ಕಳು ಮತ್ತಿತರ ಮಾಹಿತಿಗಳನ್ನು ನಿಖರವಾಗಿ ನೀಡುವುದರೊಂದಿಗೆ ಅವರಿಗೆ ಅನುಕೂಲ ಮಾಡಿಕೊಡಬೇಕು. ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಪಡೆ, ಶಿಕ್ಷಣ ಕಾವಲು ಸಮಿತಿ ಪಡೆ, ಮಕ್ಕಳ ವಿಶೇಷ ಗ್ರಾಮಸಭೆ, ನಿಯಮನುಸಾರ ಸಕಾಲದಲ್ಲಿ ನಡೆಸಬೇಕು. ಆ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗಮನ ಹರಿಸಬೇಕು ಎಂದರು.
ವಸತಿ ಶಾಲೆ ನಡೆಸುತ್ತಿರುವ ಎಲ್ಲಾ ಇಲಾಖೆಗಳು ನಿಲಯದ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಮುತುವರ್ಜಿಯಿಂದ ಮಾಡಬೇಕು. ವಸತಿ ನಿಲಯಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಬಿಸಿನೀರು ಸಹಿತ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಅಡಚಣೆ ಆಗದಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗಳಿಗೆ ಮಕ್ಕಳ ಹಕ್ಕು, ಪೋಕ್ಸೊ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣೆಗೆ ಇರುವ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಲು ತರಬೇತಿ ಕಾರ್ಯಕ್ರಮ ಆಯೋಜಿಸಬೇಕು ಎಂದ ಅವರು, ನಿಲಯಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟಿರುವ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಅಳವಡಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ನಿರಂತರವಾಗಿ ವಿದ್ಯಾರ್ಥಿಗಳ ತಪಾಸಣೆ ಕೈಗೊಳ್ಳಬೇಕು. ನಿಲಯಾರ್ಥಿಗಳಿಗೆ ಮಾದಕ ವ್ಯಸನ, ಸೈಬರ್ ಕ್ರೈಮ್ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಬೇಕು.
ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವಲ್ಲಿ ನಿಗಮದ ಅಧಿಕಾರಿಗಳು ಕ್ರಮವಹಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳಾ ಮತ್ತು ಶಿಶು ಪಾಲನಾ ಕೇಂದ್ರ ವ್ಯವವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು. ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಅಳವಡಿಸಿರುವ ಬಗ್ಗೆ ಮಾಹಿತಿ ನೀಡಬೇಕು.
ಜಿಲ್ಲೆಯಲ್ಲಿ 1,481 ವಿಶೇಷ ಚೇತನ ಮಕ್ಕಳಿದ್ದು, ಅವರಲ್ಲಿ 575 ಮಕ್ಕಳಿಗೆ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಬಾಕಿ ಇದೆ. ಯು.ಡಿ.ಐ.ಡಿ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಸರಕಾರದ ಸೌಲಭ್ಯಗಳಿಂದ ಮಕ್ಕಳು ವಂಚಿತರಾಗುವುದರಿಂದ ಬಾಕಿ ಉಳಿದ ಎಲ್ಲಾ ವಿಶೇಷ ಮಕ್ಕಳಿಗೂ ಒಂದು ತಿಂಗಳೊಳಗಾಗಿ ಯು.ಡಿ.ಐ.ಡಿ ಕಾರ್ಡ್ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಅಂಗವಿಕಲ ಕಲ್ಯಾಣಧಿಕಾರಿಗೆ ಸೂಚಿಸಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಮಾತನಾಡಿ, ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದರೂ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಬ್ರಹ್ಮಾವರದ ತಾಲುಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸದೆ ಇರುವುದು ಕಂಡುಬಂದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್. ಕಾದ್ರೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.