`ಯಕ್ಷವಿದ್ಯಾಮಾನ್ಯ' ಪ್ರಶಸ್ತಿಗೆ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಮಾ.16
ಪಲಿಮಾರು ಮಠದ ಪೂರ್ವ ಯತಿ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ತತ್ಕರಕಮಲಸಂಜಾತರಾದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನೀಡುವ ಯಕ್ಷವಿದ್ಯಾಮಾನ್ಯ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ 50 ಸಾವಿರ ರೂ. ನಗದು ಹೊಂದಿದ್ದು, ಏ.2ರಂದು ಪಲಿಮಾರು ಮೂಲಮಠದಲ್ಲಿ ನಡೆಯುವ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರ ಪ್ರಕಟನೆ ತಿಳಿಸಿದೆ.


ಪುತ್ತಿಗೆ ರಘುರಾಮ ಹೊಳ್ಳ ಅವರು ಧರ್ಮಸ್ಥಳ ಮೇಳದಲ್ಲಿ 34 ವರ್ಷ, ಕದ್ರಿ ಮೇಳದಲ್ಲಿ 6 ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ.


ತಂದೆ ಪ್ರಸಿದ್ಧ ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರೇ ಆರಂಭಿಕ ಗುರು. ಬಳಿಕ ಕಡತೋಕ ಮಂಜುನಾಥ ಭಾಗವತರಿಂದ ಪ್ರೇರಣೆ ಹೊಂದಿ ತನ್ನ ವಿಶೇಷ ಕಂಠಸಿರಿಯಿಂದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಂಡೆ-ಮದ್ದಲೆ ವಾದನಗಳಲ್ಲೂ ಅವರು ಪರಿಣತಿ ಹೊಂದಿದ್ದಾರೆ.