ಲೋಕಬಂಧು ನ್ಯೂಸ್ | ಉಡುಪಿ, ಮಾ.16
ಸಮಸ್ತ ಹಿಂದೂ ಸಮಾಜಕ್ಕೆ ಮೂಲ ಧ್ವನಿಯೇ ಛತ್ರಪತಿ ಶಿವಾಜಿ ಮಾಹಾರಾಜ್. ಹಿಂದುತ್ವವೇ ಉಸಿರಾಗಿಸಿಕೊಂಡಿರುವ ಬಿಜೆಪಿ, 7 ಮೋರ್ಚಾಗಳ ಮೂಲಕ ಮನೆ ಮನೆಗೆ ಸರ್ಕಾರಿ ಸೌಲಭ್ಯ ಮುಟ್ಟಿಸುತ್ತಿದೆ. ಪ್ರಧಾನಿ ಮೋದಿ ಎಲ್ಲರನ್ನೂ ಒಗ್ಗೂಡಿಸುತ್ತಲೇ ನವಭಾರತ ನಿರ್ಮಿಸುತ್ತಿದ್ದಾರೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿ ಪಕ್ಕದ ಮೈದಾನದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ಮತ್ತು ಉಡುಪಿ ನಗರ ಬಿಜೆಪಿ ವತಿಯಿಂದ ಭಾನುವಾರ ರಾತ್ರಿ ಆಯೋಜಿಸಿದ್ದ ಮರಾಠಿ ಸಂಸತಿ ಹಾಗೂ ಪರಂಪರೆ ಅನಾವರಣಗೊಳಿಸುವ 'ಶಿವಾಜಿ ಸಂಗಮ' ಉದ್ಘಾಟಿಸಿ ಮಾತನಾಡಿದರು.
ಶಿವಾಜಿ ಸಂಗಮ ಕಾರ್ಯಕ್ರಮ ಮುಂದಿನ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಬಲ ನೀಡಲಿ ಎಂದವರು ಆಶಿಸಿದರು.
ಹಿಂದುತ್ವಕ್ಕೆ ನಿತ್ಯವೂ ಸವಾಲು
ಮಂಗಳೂರು ಸಂಸದ ಕ್ಯಾ. ಬೃಜೇಶ್ ಚೌಟ ಮಾತನಾಡಿ ಇಂದಿಗೂ ಹಿಂದುತ್ವಕ್ಕೆ ಸವಾಲಿದೆ. ಹಿಂದೂ ಸಮಾಜ ಸದಾ ಒಗ್ಗಟ್ಟಾಗಿ ಇರಬೇಕಿದೆ. ಹಿಂದುತ್ವ ಎಂದರೆ ತುಚ್ಚ, ಒಳ್ಳೆಯ ಧರ್ಮವಲ್ಲ ಎಂದು ಬಿಂಬಿಸಲು ಕಾಂಗ್ರೆಸ್ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಸೋಲು- ಗೆಲುವು ಇಲ್ಲಿನ ಹಿಂದುತ್ವದ ಅಳಿವು- ಉಳಿವಿನ ಪ್ರಶ್ನೆಯಾಗಿದೆ. ಹಿಂದುತ್ವದ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದರು.
ಎಸ್ಎಸ್ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮರಾಠಿ ಸಮುದಾಯದ 15ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹಾಗೂ ಹತ್ತರಕಟ್ಟೆಯ 18 ಗುರಿಕಾರರಿಗೆ ಗೌರವಧನದೊಂದಿಗೆ ಸನ್ಮಾನಿಸಲಾಯಿತು.
ಎಸ್.ಟಿ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಗಳೂರು ವಿಭಾಗ ಮಾಜಿ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ಬಿಜೆಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಉಮೇಶ್ ನಾಯಕ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ಜಿಲ್ಲಾ ಮರಾಠಿ ನಾಯಕ್ ಸಮಾಜದ ಅಧ್ಯಕ್ಷ ಕೆ.ಟಿ.ನಾಯಕ್ ಉಪಸ್ಥಿತರಿದ್ದರು.
ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಿದರು. ಸುಜಲಾ ಸತೀಶ್ ವಂದೇ ಮಾತರಂ ಗೀತೆ ಹಾಡಿದರು. ಪ್ರಣಮ್ಯ ಪ್ರಾರ್ಥಿಸಿದರು. ಸುಶಾಂತ ದೊಡ್ಡಣಗುಡ್ಡೆ ಭೋಪರಾಕ್ ಹೇಳಿದರು. ಸುಮಲತಾ ಸ್ವಾಗತಿಸಿ, ವಿನಯ್ ವಂದಿಸಿದರು. ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ 'ಛತ್ರಪತಿ ಶಿವಾಜಿ' ತುಳು ನಾಟಕ ಪ್ರದರ್ಶನಗೊಂಡಿತು.
.jpg)
.jpg)