ಲೋಕಬಂಧು ನ್ಯೂಸ್ | ಉಡುಪಿ, ಮಾ.16
ನಿತ್ಯ ಜೀವನದಲ್ಲಿ ಒಂದಲ್ಲ ಒಂದು ಉತ್ಪನ್ನವನ್ನು ಉಪಯೋಗಿಸುವ ನಾವೆಲ್ಲರೂ ಗ್ರಾಹಕರು. ನಾವು ಉಪಯೋಗಿಸುವ ಉತ್ಪನ್ನಗಳಿಂದ ನಮ್ಮ ಮೇಲಾಗುವ ಪರಿಣಾಮಗಳ ಅರಿವು ಇರಬೇಕು. ನಮ್ಮಲ್ಲಿ ಪ್ರಶ್ನೆ ಮಾಡುವ ಪ್ರವೃತ್ತಿ ಹೆಚ್ಚಿದ್ದಾಗ ಪರಿಹಾರ ದೊರೆಯಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಜಿಲ್ಲಾಡಳಿತ ಉಡುಪಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಬಳಕೆದಾರರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರಜ್ಞಾವಂತರು. ಅವರು ಆಡಳಿತವನ್ನು ಪ್ರಶ್ನೆ ಮಾಡುತ್ತಾರೆ. ಜನರಲ್ಲಿ ಪ್ರಶ್ನಿಸುವ ಮನೋಭಾವ ಇದ್ದಾಗ ಆಡಳಿತವೂ ಸಕ್ರಿಯವಾಗಿ ಕೆಲಸ ಮಾಡುತ್ತದೆ.
ಜಾಹೀರಾತುಗಳ ಪ್ರಭಾವಕ್ಕೆ ಒಳಗಾಗಿ ಅಗತ್ಯವಿಲ್ಲದ ಉತ್ಪನ್ನಗಳನ್ನು ಖರೀದಿಸುತ್ತೇವೆ. ಸೌಂದರ್ಯ ಪ್ರಸಾಧನಗಳಿಂದ ಅಂದ ಹೆಚ್ಚುವುದಿಲ್ಲ ಎಂದು ಗೊತ್ತಿದ್ದೂ ಖರೀದಿಸುತ್ತೇವೆ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಆತ್ಮವಿಶ್ವಾಸವೇ ಮುಖ್ಯ ಹೊರತು ಆತನ ಬಣ್ಣ ಅಲ್ಲ ಎಂದರು.
ಮಧ್ಯಮ ವರ್ಗದ ಜನರು ತಾವು ದುಡಿದ ಹಣದಿಂದ ಉತ್ಪನ್ನಗಳು, ವಾಹನಗಳನ್ನು ಖರೀದಿಸಿ ಅವುಗಳು ಹಾಳಾದಾಗ ನಷ್ಟ ಅನುಭವಿಸುತ್ತಾರೆ. ಚಲನಚಿತ್ರ ನಟರು, ಕ್ರಿಕೆಟ್ ಆಟಗಾರರು ತಂಬಾಕು, ಮದ್ಯ, ತಂಪು ಪಾನೀಯ ಮುಂತಾದವುಗಳ ಜಾಹೀರಾತು ಪ್ರಚಾರ ಮಾಡುತ್ತಾರೆ. ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರಿಂದ ದೂರ ಇಡಬೇಕು ಎಂದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನೀಲ ತಿ. ಮಾಸರೆಡ್ಡಿ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮ ಭವಿಷ್ಯ ಕಂಡುಕೊಳ್ಳಲು ಹೊರಟಿರುವ ಕಾನೂನು ವಿದ್ಯಾರ್ಥಿಗಳಿಗೆ ಗ್ರಾಹಕ ಕಾನೂನುಗಳ ಬಗ್ಗೆ ಅರಿವು ಇರಬೇಕು. ನಮ್ಮಲ್ಲಿ ಜಾಗೃತಿ ಇದ್ದಾಗ ಪ್ರಶ್ನೆ ಮಾಡುವುದು ಮತ್ತು ಪರಿಹಾರ ದೊರಕಿಸಿ ಕೊಡುವುದು ಸಾಧ್ಯ.
ನೈಜ ದೂರುಗಳು ಬಂದಾಗ ಖಂಡಿತವಾಗಿಯೂ ಪರಿಹಾರ ದೊರಕುತ್ತದೆ. ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು 90 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ತಾಂತ್ರಿಕ ತೊಡಕುಗಳಿದ್ದಾಗ ಮಾತ್ರ ವಿಳಂಬವಾಗುತ್ತಿದೆ. ಕಾನೂನುಗಳ ತಿದ್ದುಪಡಿಯಿಂದ ಶೀಘ್ರ ನ್ಯಾಯದಾನ ಸಾಧ್ಯ ಎಂದರು.
ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ದೇವರಾಜ್ ಟಿ.ಎನ್., ಬಳಕೆದಾರರ ವೇದಿಕೆ ಸಂಚಾಲಕ ಯು.ಜಿ.ಕಾಮತ್, ಕಾನೂನು ಅಭಿರಕ್ಷಕ ರಾಜು ಪೂಜಾರಿ, ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಸುರೇಖಾ ಕೆ., ಆಯೋಗದ ಸದಸ್ಯೆ ಸುಜಾತ ಬಸವರಾಜ ಕೋರಳ್ಳಿ ಮೊದಲಾದವರಿದ್ದರು.
ಸಹ ಸಂಚಾಲಕ ಪ್ರೊ ಕೆ. ನಾರಾಯಣ ಪ್ರಸ್ತಾವನೆಗೈದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ರವೀಂದ್ರ ಸ್ವಾಗತಿಸಿದರು. ಬಳಕೆದಾರರ ವೇದಿಕೆ ವಿಶ್ವಸ್ಥರಾದ ಹರಿಕೃಷ್ಣ ಶಿವತ್ತಾಯ ನಿರೂಪಿಸಿ, ರಾಮ ಭಟ್ ವಂದಿಸಿದರು
