ತೆಂಕ ಗ್ರಾ.ಪಂ. ಕಚೇರಿ ಮಹಡಿ ಉದ್ಘಾಟನೆ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಮಾ.16
ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್ ತನ್ನ ಸಿಎಸ್ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ 25.15 ಲಕ್ಷ ರೂ. ಸಿಎಸ್ಆರ್ ಅನುದಾನದಲ್ಲಿ ಹೊಸದಾಗಿ ನಿರ್ಮಿಸಲಾದ ತೆಂಕ ಗ್ರಾ.ಪಂ. ಕಚೇರಿಯ ಮೊದಲ ಮಹಡಿ ಕಟ್ಟಡವನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು.
ಬಳಿಕ ಮಾತನಾಡಿ, 2015ರಲ್ಲಿ ಉಡುಪಿ ಉಷ್ಣ ವಿದ್ಯುತ್ ಸ್ಥಾವರ ಅದಾನಿ ಸಮೂಹದ ತೆಕ್ಕೆಗೆ ಸೇರಿದ ನಂತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಅವು ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ಉತ್ತೇಜನ ಹಾಗೂ ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ಕ್ಷೇತ್ರಗಳಲ್ಲಿ ಜಾರಿಗೊಳ್ಳುತ್ತಿವೆ ಎಂದರು.
ಸುತ್ತಮುತ್ತಲಿನ ಏಳು ಗ್ರಾ.ಪಂ.ಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ಈ ಯೋಜನೆಯಡಿ ಅದಾನಿ ಫೌಂಡೇಶನ್ ಸುಮಾರು 12 ಕೋಟಿ ರೂ. ಮೌಲ್ಯದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಅದರಲ್ಲಿ ತೆಂಕ ಗ್ರಾ.ಪಂ.ನಲ್ಲೇ 2.10 ಕೋಟಿ ರೂ. ಮೌಲ್ಯದ ಕಾಮಗಾರಿ ಜಾರಿಗೊಂಡಿವೆ.


ಪ್ರತಿವರ್ಷ ಪಂಚಾಯತ್'ಗಳು ಸಲ್ಲಿಸುವ ಕ್ರಿಯಾ ಯೋಜನೆ ಆಧಾರದ ಮೇಲೆ ಈ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


ಕ್ರಿಯಾ ಯೋಜನೆಯ ಭಾಗವಾಗಿ ತೆಂಕ ಗ್ರಾ.ಪಂ. ತನ್ನ ವ್ಯಾಪ್ತಿಯ ಜನಸಂಖ್ಯೆ ಮತ್ತು ಆಡಳಿತಾತ್ಮಕ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪಂಚಾಯತ್ ಕಚೇರಿ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಈ ಮನವಿಗೆ ಸ್ಪಂದಿಸಿ ಅದಾನಿ ಪವರ್ ಲಿಮಿಟೆಡ್ ಮತ್ತು ಅದಾನಿ ಫೌಂಡೇಶನ್ ಸಹಯೋಗದಲ್ಲಿ ಈಗಿರುವ ಪಂಚಾಯತ್ ಕಟ್ಟಡದ ಮೇಲೆ ಮೊದಲ ಮಹಡಿ ನಿರ್ಮಿಸಲಾಗಿದೆ. ಹೊಸದಾಗಿ ನಿರ್ಮಿಸಲಾದ ಈ ಕಚೇರಿ ಸ್ಥಳ ಪಂಚಾಯತ್ ಆಡಳಿತದ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ಸುಧಾರಿಸಲು ಸಹಾಯಕವಾಗಲಿದೆ.


ಸುಧಾರಿತ ಮೂಲಸೌಕರ್ಯದಿಂದ ಪಂಚಾಯತ್ ಕಚೇರಿ ಗ್ರಾಮಸ್ಥರಿಗೆ ಸುಲಭವಾಗಿ ಲಭ್ಯವಾಗುವ ಆಡಳಿತಾತ್ಮಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಅದರಿಂದ ಅರ್ಜಿಗಳ ತ್ವರಿತ ನಿರ್ವಹಣೆ, ಅಧಿಕಾರಿಗಳ ನಡುವಿನ ಉತ್ತಮ ಸಂಯೋಜನೆಗಳಿಗೆ ಪೂರಕವಾಗಿದೆ ಎಂದರು.


ಗ್ರಾಮೀಣ ಅಭಿವೃದ್ಧಿಗೆ ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಅದಾನಿ ಸಂಸ್ಥೆಗೆ ತೆಂಕ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುರೇಖಾ ಕೃತಜ್ಞತೆ ಸಲ್ಲಿಸಿದರು.


ಅದಾನಿ ಫೌಂಡೇಶನ್ ಕೈಗೊಳ್ಳುತ್ತಿರುವ ಸಿಎಸ್ಆರ್ ಕಾರ್ಯಕ್ರಮಗಳು ಸಮುದಾಯಗಳಿಗೆ ಪ್ರಯೋಜನ ತಂದುಕೊಡುತ್ತಿವೆ ಎಂದರು.


ಸಮಾಜದ ಕಲ್ಯಾಣಕ್ಕಾಗಿ ನೀಡುತ್ತಿರುವ ಮಹತ್ವದ ಕೊಡುಗೆಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ಅದಾನಿ ಸಮೂಹಕ್ಕೆ ಧನ್ಯವಾದ ಸಲ್ಲಿಸಿದರು. ಗ್ರಾಮಲೆಕ್ಕಾಧಿಕಾರಿ ವಿಜಯ್, ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪ್ರವೀಣ್, ಪಂಚಾಯತ್ ಮಾಜಿ ಸದಸ್ಯರಾದ ಕಿಶೋರ್ ಕುಮಾರ್, ಬಾಲಚಂದ್ರ‌ ಮತ್ತು ಅರುಣಾ ಕುಮಾರಿ, ಅದಾನಿ ಪವರ್ ಲಿಮಿಟೆಡ್ ಎಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಶನ್‌ನ ಅನುದೀಪ್ ಮೊದಲಾದವರಿದ್ದರು.