ಕಲೆ ಆಸ್ವಾದಿಸಿ ಪ್ರೋತ್ಸಾಹಿಸುವ ಪ್ರೇಕ್ಷಕರು ಅಗತ್ಯ

ಲೋಕಬಂಧು ನ್ಯೂಸ್ | ಉಡುಪಿ. ಮಾ.15
ಯಾವುದೇ ಕಲೆಯ ಬೆಳವಣಿಗೆಗೆ ಆ ಕಲೆಯನ್ನು ಆಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರು ಬೇಕು. ಉತ್ತಮ ರಂಗಭೂಮಿ ಕಲಾವಿದರಿದ್ದರೆ ಕಲೆಯ ಬೆಳವಣಿಗೆ ಸಾಧ್ಯ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ್ ಭಟ್ ಹೇಳಿದರು.
ನಗರದ ಎಂಜಿಎಂ ಕಾಲೇಜಿನಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಉಡುಪಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲೆಗೆ ನೀಡಿದ ಅನುಪಮ ಪ್ರೋತ್ಸಾಹಕ್ಕಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನೀಡುವ 2026ನೇ ಸಾಲಿನ 'ತಲ್ಲೂರ್ಸ್ ಯಕ್ಷರತ್ನ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು.


20 ವರ್ಷಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಇಲ್ಲಿನ ಸಂಸ್ಕೃತಿ, ಜಾನಪದ ಕಲೆಗಳನ್ನು ನೋಡಿ ಅರಿತಿದ್ದೇನೆ. ಈ ಪ್ರಶಸ್ತಿಯನ್ನು ಕಲಾ ಪೋಷಕರು ಹಾಗೂ ಪ್ರೋತ್ಸಾಹಕರಿಗೆ ಅರ್ಪಿಸುವುದಾಗಿ ಹೇಳಿದ ಡಾ.ಭಟ್, ಡಾ.ತಲ್ಲೂರು ನೇತೃತ್ವದಲ್ಲಿ ಇಂಥ ಉತ್ತಮ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.


ಅಂಬಲಪಾಡಿ ದೇವಳದ ಕ್ಷೇತ್ರಾಧಿಕಾರಿ ಡಾ.ನಿ.ಬೀ. ವಿಜಯ ಬಲ್ಲಾಳ್ ಮಾತನಾಡಿ, ಉಡುಪಿ ಸಾಂಸ್ಕೃತಿಕ ಲೋಕದ ತವರೂರು. ಯಕ್ಷಗಾನ, ನಾಟಕ, ಜಾನಪದ ಹೀಗೆ ಎಲ್ಲಾ ವೈವಿಧ್ಯಗಳೂ ಇಲ್ಲಿವೆ ಎಂದರು.


ಕಾರ್ಯಕ್ರಮದ ರೂವಾರಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಟಿ.ಶ್ಯಾಮ್ ಭಟ್ ಯಕ್ಷಗಾನ ಕಲೆಗೆ ನೀಡುತ್ತಿರುವ ಪ್ರೋತ್ಸಾಹ ಅಪಾರವಾದುದು. ಇಂಥ ಕಲಾ ಪ್ರೋತ್ಸಾಹಕರಿಂದಲೇ ಯಕ್ಷಗಾನ ಇಂದು ಜನಮಾನಸದಲ್ಲಿದೆ. ಟ್ರಸ್ಟ್ ಕಲಾ ಸಂಘಟಕರು, ಕಲಾವಿದರು, ಕಲಾ ಪ್ರೋತ್ಸಾಹಕರನ್ನು ಗುರುತಿಸಿ ಗೌರವಿಸುತ್ತಿದೆ ಎಂದರು.


ಉದ್ಯಮಿ ಗುಜ್ಜಾಡಿ ವರುಣ್ ನಾಯಕ್, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಎನ್.ಆರ್.ಬಲ್ಲಾಳ್ ಮತ್ತು ಭಾಸ್ಕರ ರಾವ್ ಕಿದಿಯೂರು ಇದ್ದರು.


ಈ ಸಂದರ್ಭದಲ್ಲಿ ಈ ಮೂರು ದಿನಗಳ ಉತ್ತರ ಭಾರತದ ಜಾನಪದ ಉತ್ಸವಕ್ಕೆ ಸಹಕರಿಸಿದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಅಧಿಕಾರಿಗಳಾದ ಗಜಾನನ ಹಾಗೂ ನೀಲೇಶ್ ಅವರನ್ನು ಗೌರವಿಸಲಾಯಿತು.


ಶ್ರೀನಿವಾಸ ಉಪಾಧ್ಯಾಯ ಹಾಗೂ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ಸಂಮಾನ ಪತ್ರ ವಾಚಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಜಾನಪದ ಕಲಾ ವೈವಿಧ್ಯದ ಮೂರನೇ ಹಂತದಲ್ಲಿ ಆಂಧ್ರ ಪ್ರದೇಶದ ಉರುಮುಲು ನೃತ್ಯ, ತೆಲಂಗಾಣದ ಗುಸ್ತಾದಿ ನೃತ್ಯ, ಮಹಾರಾಷ್ಟ್ರದ ಲಾವಣಿ, ಕೋಳಿ ನೃತ್ಯ, ತರ್ಪಾ ಕುಣಿತ, ಛತ್ತೀಸಗಢದ ಪಂಥಿ ಕುಣಿತ, ಮಧ್ಯಪ್ರದೇಶದ ಬಧಾಯಿ ಹಾಗೂ ನೋರ್ಟಾ ನೃತ್ಯದ ಜೊತೆಗೆ ಕರ್ನಾಟಕದ ಗೋಂದೋಲು, ಕೊರಗರ ಸಾಂಸ್ಕೃತಿಕ ನೃತ್ಯಗಳ ಪ್ರದರ್ಶನ ನಡೆಯಿತು.