ಲೋಕಬಂಧು ನ್ಯೂಸ್ | ಉಡುಪಿ, ಮಾ.16
ವಿವಿಧ ಕ್ಷೇತ್ರಗಳಲ್ಲಿ ಮಹಿಳಿಗೆ ಗೌರವಾನ್ವಿತ ಸ್ಥಾನಮಾನ ದೊರೆತರೂ ಸಮಾನತೆ ಮರೀಚಿಕೆಯಾಗಿದೆ. ಮಹಿಳೆ ಆರ್ಥಿಕವಾಗಿ ಸಬಲಗೊಂಡರೆ ಮಾತ್ರ ಸಮಾನತೆ ಪಡೆಯಲು ಸಾಧ್ಯ ಎಂದು ರಂಗ- ಚಲನಚಿತ್ರ ನಟಿ ಗೀತಾ ಸುರತ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ರೆಡ್ ಕ್ರಾಸ್ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಲೇಖಕಿಯರು ಮತ್ತು ವಾಚಕಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ 'ಮಹಿಳೆ, ರಂಗಭೂಮಿ ಮತ್ತು ಕಾರಂತರ ಬರಹಗಳು' ವಿಷಯದಲ್ಲಿ ಉಪನ್ಯಾಸ ನೀಡಿದರು.
ರಾಜ್ಯ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಮಾಪನ ಭಾಷಣ ಮಾಡಿದ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಹಿಳಾ ದಿನಾಚರಣೆ ಸಪ್ತಾಹ ಅನೇಕ ವಿದ್ಯಾರ್ಥಿಗಳಲ್ಲಿ ಮಹಿಳಾ ಸಮಾನತೆಯ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.
ರೆಡ್ ಕ್ರಾಸ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಡಾ.ಪಾರ್ವತಿ ಜಿ. ಐತಾಳ್, ಕ್ಯಾ. ಡಾ.ಸುಕನ್ಯಾ ಮೇರಿ ಮಾರ್ಟಿಸ್, ಸುಜಯ ಕೆ.ಎಸ್., ಶ್ಯಾಮಲಾ ಸಿ.ಕೆ. ಮತ್ತು ಕುಸುಮಾ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ರಂಗವಲ್ಲಿ ಮೂಲಕ ಮಾನವ ಹಕ್ಕುಗಳ ಪರಿಚಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರಾದ ವಿ.ಜಿ. ಶೆಟ್ಟಿ ಮತ್ತು ಟಿ. ಚಂದ್ರಶೇಖರ್, ಖಚಾಂಚಿ ರಮಾದೇವಿ, ಕಾರಂತ ಟ್ರಸ್ಟ್ ಸದಸ್ಯರಾದ ಡಾ.ಭಾರತಿ ಮರವಂತೆ, ಮಹಮ್ಮದ್ ಶರೀಫ್ ಮತ್ತು ಸತೀಶ್ ಕೊಡವೂರು ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ದಿವ್ಯಾ ಎಂ.ಎಸ್. ಪ್ರಾರ್ಥಿಸಿದರು. ಡಾ. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪೂರ್ಣಿಮ ಸ್ವಾಗತಿಸಿದರು. ಜಿಲ್ಲಾ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ. ನಿಕೇತನ ವಂದಿಸಿದರು. ಉಪನ್ಯಾಸಕಿ ಶಾಲಿನಿ ನಿರೂಪಿಸಿದರು.
ಸಪ್ತಾಹ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
