ಲೋಕಬಂಧು ನ್ಯೂಸ್ | ಕಾರ್ಕಳ, ಜೂ.30
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಔದ್ಯೋಗಿಕವಾಗಿ ವಿಪುಲ ಅವಕಾಶಗಳಿದ್ದು, ರಾಜ್ಯದ ವಿವಿಧ ಭಾಗದ ಜನರು ಹೆಚ್ಚಿನ ಸಂಖ್ಯೆಯಲಿದ್ದಾರೆ. ಆದರೆ, ಕರಾವಳಿ ಭಾಗದ ಜನರ ಪ್ರಾತಿನಿಧಿತ್ವ ಬಹಳ ಕಡಿಮೆ ಇದೆ. ಈ ಭಾಗದ ಜನರು ಬುದ್ದಿವಂತರು, ವಿದ್ಯಾವಂತರು. ಇಂಥ ಅವಕಾಶಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ಮತ್ತು ಕಾರ್ಕಳ ಪೊಲೀಸ್ ಇಲಾಖೆ ಆಶ್ರಯದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮಂಜುನಾಥ ಪೈ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ವಿಧಾನ ಬಗ್ಗೆ ಸೋಮವಾರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ ಎಂ.ಎಸ್., ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ, ಸವಲತ್ತು ಹಾಗೂ ಕೆಲಸದ ಉಪಯೋಗದ ಮಾಹಿತಿ ನೀಡಿದರು.
ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರಿಕ್ಷಕ (ತನಿಖೆ) ನವೀನ್ ಬೋರ್ಕರ್, ಪ್ರೊಬೆಷನರಿ ಪಿಎಸ್ಐ ಸೀಮಾ ಅಂಜುಮ್ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
