ಲೋಕಬಂಧು ನ್ಯೂಸ್ | ನವದೆಹಲಿ, ಜೂ.24
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ, ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಭೂ ಹಗರಣದ ಆರೋಪ ಮಾಡಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಬುಧವಾರ ಸುದ್ದಿಗೋಷ್ಠಿ ನಡೆಸಿ, ಖರ್ಗೆ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಸಿದ್ಧಾರ್ಥ್ ವಿಹಾರ್ ಟ್ರಸ್ಟ್ ಮೂಲಕ ಕರ್ನಾಟಕದಲ್ಲಿ ಅನೇಕ ಎಕರೆ ಭೂಮಿಯನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ, ಪುತ್ರ ಪ್ರಿಯಾಂಕ್ ಖರ್ಗೆ, ಅವರ ಪತ್ನಿ ಹಾಗೂ ಅಳಿಯ ಈ ಟ್ರಸ್ಟ್‌ನೊಂದಿಗೆ ಸಂಬಂಧ ಹೊಂದಿದ್ದು, ರಾಜಕೀಯ ಪ್ರಭಾವ ಬಳಸಿ ಭೂಮಿ ಹಂಚಿಕೆ ಮಾಡಿಸಿಕೊಳ್ಳಲಾಗಿದೆ.
2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಏರೋಸ್ಪೇಸ್ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕಾಗಿ ಮೀಸಲಿಡಲಾಗಿದ್ದ ಸುಮಾರು 100 ಕೋಟಿ ರೂ. ಮೌಲ್ಯದ ಐದು ಎಕರೆ ಭೂಮಿಯನ್ನು ಸಿದ್ಧಾರ್ಥ್ ವಿಹಾರ್ ಟ್ರಸ್ಟ್‌ಗೆ ಹಂಚಿಕೆ ಮಾಡಲಾಗಿದೆ. ಆದರೆ, ಆ ಭೂಮಿಯಲ್ಲಿ ಉದ್ದೇಶಿತ ಸಂಶೋಧನಾ ಚಟುವಟಿಕೆ ನಡೆಸಲಾಗುತ್ತಿಲ್ಲ ಎಂದವರು ದೂರಿದರು.
ಅಲ್ಲದೆ, 2016ರಲ್ಲಿ ಪಾಲಿ ಭಾಷಾ ಸಂಶೋಧನೆಗಾಗಿ 19 ಎಕರೆ ಭೂಮಿ, 2011ರಲ್ಲಿ ಗುಲ್ಬರ್ಗಾ ಪ್ರದೇಶದಲ್ಲಿ 7.18 ಎಕರೆ ಭೂಮಿ ಹಾಗೂ 2010ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 8,125 ಚದರ ಮೀಟರ್ ಭೂಮಿ ಹಂಚಿಕೆಗೊಂಡಿರುವ ವಿಚಾರಗಳನ್ನೂ ಭಂಡಾರಿ ಪ್ರಸ್ತಾಪಿಸಿದರು.
ಸಿದ್ಧಾರ್ಥ್ ವಿಹಾರ್ ಟ್ರಸ್ಟ್ ಮೂಲಕ ಖರ್ಗೆ ಕುಟುಂಬ ಕರ್ನಾಟಕದಲ್ಲಿ ಭೂ ಕಬಳಿಕೆ ನಡೆಸಿದೆ. ಆ ಪ್ರಕರಣಗಳಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಎ) ಮತ್ತು 13(1)(ಬಿ) ಉಲ್ಲಂಘನೆಯಾಗಿದೆ. ವಾಯುಯಾನ ಮತ್ತು ರಕ್ಷಣಾ ಸಂಶೋಧನೆಗಾಗಿ ಮೀಸಲಾದ ಭೂಮಿಯನ್ನು ಟ್ರಸ್ಟ್‌ಗೆ ನೀಡಲಾಗಿದೆ. ಆದರೆ, ಅಲ್ಲಿ ಯಾವುದೇ ಸಂಶೋಧನಾ ಅಥವಾ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಭಂಡಾರಿ ಹೇಳಿದರು.
