ಅಡ್ಡ ಮತದಾನ ವಿವಾದ: ಬೇಲೂರು ಶಾಸಕ ಎಚ್.ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

ಲೋಕಬಂಧು ನ್ಯೂಸ್ | ಉಜಿರೆ, ಜೂ.30
ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ವಲಯದಲ್ಲಿ ಅಡ್ಡ ಮತದಾನದ ಬಗ್ಗೆ ತೀವ್ರ ಚರ್ಚೆಯಾಗುತ್ತಿರುವಂತೆಯೇ ಬೇಲೂರು ಶಾಸಕ ಎಚ್.ಕೆ. ಸುರೇಶ್ ಮಂಗಳವಾರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದರು.
ಸುಮಾರು 300ಕ್ಕೂ ಅಧಿಕ ಬೆಂಬಲಿಗರೊಂದಿಗೆ 100ಕ್ಕೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ, ತನ್ನ ಮೇಲೆ ಅಪಪ್ರಚಾರ ಮಾಡಿದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಹುಂಡಿಗೆ ಕಾಣಿಕೆ ಹಾಕಿದರು.


'ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷಕ್ಕೆ ದ್ರೋಹ ಮಾಡಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ. ಪಕ್ಷದ ವರಿಷ್ಠರು ಸೂಚಿಸಿದ ವ್ಯಕ್ತಿಗೆ ಮತದಾನ ಮಾಡಿದ್ದೇನೆ ಎಂದು ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ' ಎಂದವರು ಹೇಳಿದರು.


ನನ್ನ ಬೆಳವಣಿಗೆಯನ್ನು ಸಹಿಸದ ಕೆಲವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ದೇವಸ್ಥಾನಕ್ಕೆ ಹೋಗುವ ಮೊದಲು ಅಣ್ಣಪ್ಪಸ್ವಾಮಿ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಾನು ಮೋಸ ಮಾಡಿಲ್ಲ. ಅಪಪ್ರಚಾರ ಮಾಡಿದವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿ ತೆಂಗಿನ ಕಾಯಿ ಒಡೆದರು. ಬರುವಾಗ ನೇತ್ರಾವತಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿ ವಂದಿಸಿ, ಬಳಿಕ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಶಾಸಕರು ಕಾರ್ಯಕರ್ತರ ಜೊತೆ ಆಣೆ-ಪ್ರಮಾಣ ಮಾಡಿದರು.