ಲೋಕಬಂಧು ನ್ಯೂಸ್ | ಮಲ್ಪೆ, ಜೂ.29
ಮನುಷ್ಯನಿಗೆ ಮಾನಸಿಕ, ದೈಹಿಕ ಹಾಗೂ ಸಾಂಸ್ಕೃತಿಕ ಅಂಶಗಳು ಅತೀ ಅವಶ್ಯ. ಈ ಮೂರು ವಿಚಾರ ಹೊಂದಿದಾಗ ವ್ಯಕ್ತಿ, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯ ವೃದ್ಧಿಸುವ ಶಕ್ತಿಯನ್ನು ಸಾಂಸ್ಕೃತಿಕ ಚಟುವಟಿಕೆ ಹೊಂದಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು.
ಮಲ್ಪೆ ಬೀಚ್'ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸಿಂಫನಿ ಸಂಗೀತ ಬಳಗ ಹಾಗೂ ಭ್ರಾಮರಿ ಜನಪದ ಕಲಾ ತಂಡ ಉಡುಪಿ ಸಹಯೋಗದೊಂದಿಗೆ ನಡೆದ ಕಲಾ ನಡಿಗೆ ನಿಮ್ಮ ಬಳಿಗೆ ಸುಗಮ ಸಂಗೀತ ಹಾಗೂ ಜನಪದ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಪ್ರದೇಶ ಜನಪದ ಸಂಪತ್ತನ್ನು ಆಗಾಧವಾಗಿ ಹೊಂದಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಜಾನಪದ ಪ್ರಕಾರಗಳು ಅನೇಕ ಕಾರಣದಿಂದಾಗಿ ದೂರ ಉಳಿದಿದ್ದು, ಆ ನಿಟ್ಟಿನಲ್ಲಿ ಕಲಾ ನಡಿಗೆ ನಿಮ್ಮ ಬಳಿಗೆ ಕಾರ್ಯಕ್ರಮವನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಕಲಾ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಸಿಂಫನಿ ಸಂಗೀತ ಬಳಗದಿಂದ ಸುಗಮ ಸಂಗೀತ ಹಾಗೂ ಜನಪದ ಗೀತ ಗಾಯನ, ಭ್ರಾಮರಿ ಜನಪದ ಕಲಾ ತಂಡದ ವತಿಯಿಂದ ಕಂಗೀಲು ನೃತ್ಯ ಪ್ರದರ್ಶನಗೊಂಡಿತು.
ಮಲ್ಪೆ ಬಿಲ್ಲವ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ನಗರಸಭಾ ನಾಮನಿರ್ದೇಶಿತ ಮಾಜಿ ಸದಸ್ಯ ಯಾದವ ಅಮಿನ್ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಜಾನಪದ ಕಲಾವಿದ ಶಂಕರ್ ದಾಸ್ ಚಡ್ಕಳ ನಿರೂಪಿಸಿ, ವಂದಿಸಿದರು.
.jpg)