ಅರ್ಹರಿಗೆ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ

ಲೋಕಬಂಧು ನ್ಯೂಸ್ | ಉಡುಪಿ, ಜೂ.26
ಗ್ಯಾರಂಟಿ ಯೋಜನೆಯ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಅರ್ಹ ಫಲಾನುಭವಿಗಳು ಅದರ ಲಾಭ ಪಡೆಯುವಂತಾಗಬೇಕು. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಗುರಿಯಾಗಿರಿಸಿಕೊಂಡು ಸೈಬರ್ ವಂಚಕರು ಯೋಜನೆಯ ಹಣ ಮಂಜೂರು ಮಾಡುವುದಾಗಿ ಹೇಳಿ ಬ್ಯಾಂಕ್ ಖಾತೆ ಮತ್ತು ಓ.ಟಿ.ಪಿ ಪಡೆದು ಹಣ ಕಬಳಿಸುತ್ತಿರುವ ಪ್ರಕರಣಗಳು ಕೇಳಿಬರುತ್ತಿವೆ. ಆ ಬಗ್ಗೆ ಅನುಮಾನಾಸ್ಪದ ಕರೆ ಬಂದಾಗ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ನೀಡಬೇಕು. ವಂಚನೆಗೊಳಗಾದ ಒಂದು ಗಂಟೆಯೊಳಗೆ ಸಹಾಯವಾಣಿಗೆ ದೂರು ನೀಡಿದಾಗ ಶೇ.90ರಷ್ಟು ಹಣ ಮರುಪಾವತಿ ಆಗುವ ಸಾಧ್ಯತೆ ಇದೆ. ಆ ಬಗ್ಗೆ ಫಲಾನುಭವಿಗಳು ಜಾಗರೂಕರಾಗಿರುವಂತೆ ಅರಿವು ಮೂಡಿಸಬೇಕು ಎಂದರು.


ಉಡುಪಿ ತಾಲೂಕಿಗೆ ಸಂಬಂಧಿಸಿದಂತೆ ಗೃಹಲಕ್ಷ್ಮೀ ಯೋಜನೆಯಡಿ 2,318 ಮರಣ ಹೊಂದಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತದ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಸಂಬಂಧಪಟ್ಟ ಅಂಗನವಾಡಿ ಶಿಕ್ಷಕಿಯರ ಮೂಲಕ ಆದಷ್ಟು ಶೀಘ್ರ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದರು.


ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರು ಮತ್ತು ಫಲಾನುಭವಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಅಥವಾ ವದಂತಿಗಳಿಗೆ ಕಿವಿಗೊಡಬಾರದು. ಪ್ರಸ್ತುತ ಯಾವುದೇ ಮಾರ್ಗಸೂಚಿ ಬಂದಿಲ್ಲ. ಗ್ಯಾರಂಟಿ ಯೋಜನೆಗಳು ಈ ಹಿಂದಿನಂತೆಯೇ ಮುಂದುವರಿಯಲಿದ್ದು ಯಾರೂ ಆತಂಕಪಡಬೇಕಾಗಿಲ್ಲ ಎಂದರು.


ಉಡುಪಿ ತಾಲೂಕಿನ ಕೆಲವು ಹೊಸ ರೂಟ್'ಗಳ ಬಸ್ ಬೇಡಿಕೆಯನ್ನು ಜಿಲ್ಲಾ ಸಮಿತಿಗೆ ಕಳಿಸಲಾಗಿದ್ದು ಶೀಘ್ರದಲ್ಲಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ಉಚಿತ ಬಸ್ ಪಾಸ್'ಗಾಗಿ ಸೇವಾಸಿಂಧು ಪೋರ್ಟಲ್'ನಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.


ತುರ್ತು ವೈದ್ಯಕೀಯ ಚಿಕಿತ್ಸೆ ಅವಶ್ಯವಿರುವ ಸಾರ್ವಜನಿಕರು ಹೊಸ ಪಡಿತರ ಚೀಟಿ ಪಡೆಯಲು ಅಗತ್ಯ ದಾಖಲೆಯೊಂದಿಗೆ ಕರ್ನಾಟಕ ಒನ್ ಸೆಂಟರ್‌ನಲ್ಲಿ ಅರ್ಜಿ ಸಲ್ಲಿಸಿದಲ್ಲಿ ನಿಯಮಾನುಸಾರ ಪರಿಶೀಲಿಸಿ, ಪಡಿತರ ಚೀಟಿ ನೀಡಲಾಗುವುದು. ಅನರ್ಹರು ಗೃಹಜ್ಯೋತಿ ಯೋಜನೆ ಪಡೆಯದಂತೆ ನೋಡಿಕೊಳ್ಳಬೇಕು. ಕೆಲವು ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿದರೂ ಯುವನಿಧಿ ಯೋಜನೆ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದ್ದು, ಆ ಬಗ್ಗೆ ಅನರ್ಹರ ಪಟ್ಟಿ ತಯಾರಿಸಿ ನೀಡುವಂತೆ ರಮೇಶ ಕಾಂಚನ್ ತಿಳಿಸಿದರು.


ಸಭೆಯಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಫರ್ಜಾನಾ ಎಂ., ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.