ಲೋಕಬಂಧು ನ್ಯೂಸ್ | ಕುಂದಾಪುರ, ಜೂ.14
ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಹಾಗೂ ಬೈಕ್ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯನ್ನು ಗುಜರಾತ್ ರಾಜ್ಯದ ಅಮೇಲಿ ಜಿಲ್ಲೆಯ ಸಾವರ್ ಕುಂಡ್ಲ ಪ್ರದೇಶದ ನಿವಾಸಿ ಲಾಲಾಜಿ ಬಾಯ್ ಬುದಾಬಾಯ್ ಸೋಲಂಕಿ (37) ಎಂದು ಗುರುತಿಸಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಸಂಗಮ್ ಜಂಕ್ಷನ್ ಸಮೀಪದ ಜೆಎಂಜೆ ವಿಲ್ಲಾ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಮನೆಯ ಮುಂಭಾಗದ ಬಾಗಿಲಿನ ಚೀಲಕ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 10 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದರು. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ಅವಧಿಯಲ್ಲಿ ಕುಂದಾಪುರ ಕಸಬಾ ಗ್ರಾಮದ ವಿನಯ ಆಸ್ಪತ್ರೆ ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹೀರೋ ಹೋಂಡಾ ಮೋಟಾರ್ ಸೈಕಲ್‌ನ್ನು ಕಳವು ಮಾಡಲಾಗಿತ್ತು. ಸುಮಾರು 20 ಸಾವಿರ ರೂ. ಮೌಲ್ಯದ ಬೈಕ್ ಕಳ್ಳತನ ಪ್ರಕರಣವೂ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಕುಂದಾಪುರ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದರು.
ತನಿಖೆ ವೇಳೆ ಆರೋಪಿ ಗುಜರಾತ್ ಮೂಲದವನಾಗಿರುವುದು ಬೆಳಕಿಗೆ ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆರೋಪಿ ಕುಂದಾಪುರದಲ್ಲಿ ಮನೆ ಕಳ್ಳತನ ಹಾಗೂ ಬೈಕ್ ಕಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯ ಮಾಹಿತಿಯ ಆಧಾರದ ಮೇಲೆ ಕಳವು ಮಾಡಲಾಗಿದ್ದ ಬೈಕ್'ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.