ಲೋಕಬಂಧು ನ್ಯೂಸ್ | ಉಡುಪಿ, ಜೂ.13
ಮಾಜಿ ಸಚಿವ, ಹಾಲಿ ಬಿಜೆಪಿ ಮುಂದಾಳು ಪ್ರಮೋದ್ ಮಧ್ವರಾಜ್ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸ್ವತಃ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅವರು, 'ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಲವು ಸುದ್ದಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂಬ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ.
ನಾನು ಈ ಹಿಂದೆ ಕೂಡಾ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕಾಗಿ ಸೇರಿಲ್ಲ, ಜನಸೇವೆಯ ಉದ್ದೇಶದಿಂದ ಸೇರಿದ್ದೇನೆ. ಅಧಿಕಾರ ಅಥವಾ ಹುದ್ದೆಗಳು ಬಂದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ಆದರೆ, ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಿದೆ.
ನಾನು ಯಾವುದೇ ಅಧಿಕಾರ ಅಥವಾ ಹುದ್ದೆಗಾಗಿ ಪರಿತಪಿಸುತ್ತಿಲ್ಲ. ಹುದ್ದೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿಸುವುದಿಲ್ಲ, ಜನರ ವಿಶ್ವಾಸ ಮತ್ತು ಸೇವೆಯೇ ವ್ಯಕ್ತಿಯ ನಿಜವಾದ ಶಕ್ತಿಯಾಗಿದೆ ಎಂಬ ನಂಬಿಕೆ ನನ್ನದು. ನನಗೆ ಅಧಿಕಾರ ಸಿಕ್ಕರೆ ಅದು ಕೇವಲ ಜನರ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಮಾತ್ರ. ಅಧಿಕಾರ ಎನ್ನುವುದು ನನ್ನ ಪಾಲಿಗೆ ಗೌರವ ಅಥವಾ ಸ್ಥಾನಮಾನವಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿಯಾಗಿದೆ.
ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜವಾಬ್ದಾರಿ ಸಿಗದಿದ್ದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಜನರ ಮಧ್ಯೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ನನ್ನ ಕಾರ್ಯ, ಪಕ್ಷದ ಮೇಲಿನ ನಿಷ್ಠೆ ಹಾಗೂ ಜನಸೇವೆಯ ಬದ್ಧತೆಯನ್ನು ಖಂಡಿತವಾಗಿಯೂ ಗುರುತಿಸಿ ಸೂಕ್ತ ಹಾಗೂ ಉತ್ತಮ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
ನನ್ನ ರಾಜಕೀಯ ಪಯಣದಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಅವರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನಗೆ ಮತ್ತಷ್ಟು ಶಕ್ತಿಯನ್ನು ನೀಡುತ್ತಿದೆ.
ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಎಲ್ಲರಿಗೂ ಮನವಿ ಮಾಡುತ್ತೇನೆ.
ಅಧಿಕಾರ ನನ್ನ ಗುರಿಯಲ್ಲ ಜನಸೇವೆಯೇ ನನ್ನ ಧ್ಯೇಯ. ಅಧಿಕಾರ ಸಿಕ್ಕರೆ ಜನರ ಸೇವೆಗೆ ಬಳಸುತ್ತೇನೆ, ಸಿಗದಿದ್ದರೂ ಜನರ ಸೇವೆಯನ್ನು ನಿಲ್ಲಿಸುವುದಿಲ್ಲ' ಎಂದು ತಿಳಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಅದು ಕೈತಪ್ಪಿದ ಬಳಿಕ ಈ ಬಾರಿಯ ರಾಜ್ಯಸಭಾ ಸ್ಥಾನದ ನಿರೀಕ್ಷೆಯೂ ಹುಸಿಯಾಯಿತು. ಈ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಸೇರ್ಪಡೆಯ ವದಂತಿ ಹಬ್ಬಿತ್ತು.
