ಸಮಾಜದ ಸೇವೆಗೆ ಆದ್ಯತೆ ನೀಡಿ

ಲೋಕಬಂಧು ನ್ಯೂಸ್ | ಶಿರ್ವ, ಜೂ.14
ಪರರ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು. ಸಮಾಜದ ಸೇವೆ ಮೊದಲ ಆದ್ಯತೆಯಾಗಬೇಕು. ಆ ಮೂಲಕ ಸಂಘಟನೆಗಳು ಸಮಾಜದ ಇಂದಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ ಎಂದು ಉಡುಪಿ ಬಿಷಪ್ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಹೇಳಿದರು.
ಭಾನುವಾರ ಇಲ್ಲಿನ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವಾರ್ಷಿಕ ಮಹಾಸಭೆ ಹಾಗೂ ದಿ.ಫ್ರಾನ್ಸಿಸ್ ದಾಂತಿ ಪುಸ್ತಕ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಿದ್ದು ಸಮುದಾಯವೂ ಆ ನಿಟ್ಟಿನಲ್ಲಿ ಮುಂದುವರಿಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಹಳೆಯ ಪದ್ದತಿಯನ್ನು ಕೈಬಿಟ್ಟು ಹೊಸ ಆವಿಷ್ಕಾರಗಳಿಗೆ ಹೊಂದಿಕೊಂಡು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾಗಿದೆ.


ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಆವಶ್ಯಕತೆಯಾಗಿದ್ದು ಧರ್ಮಪ್ರಾಂತ್ಯಕ್ಕೆ ಒಂದು ಉತ್ತಮ ಹಾಗೂ ಸುಸಜ್ಜಿತ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ಅಗತ್ಯತೆ ಇದ್ದು, ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಲಾಗುತ್ತಿದೆ. ಉತ್ತಮ ಶಾಲೆ ಮತ್ತು ಆಸ್ಪತ್ರೆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ `ಸಖಿ ಸೂಚಿಸಿದ ಸೌಗಂಧ' ಕವನ ಸಂಕಲನಕ್ಕೆ 2025ನೇ ಸಾಲಿನ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರ ನೀಡಿ ಗೌರವಿಸಲಾಯಿತು.


ಮುಖ್ಯ ಅತಿಥಿಯಾಗಿದ್ದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೊನ್ಸನ್ ಡಿ'ಆಲ್ಮೆಡಾ ಸಮುದಾಯದ ಅಭಿವೃದ್ಧಿ ಮತ್ತು ಜಾಗೃತಿ ಮೂಡಿಸುವಲ್ಲಿ, ಸಮುದಾಯಕ್ಕೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಿ ಯಶಸ್ಸು ಕಂಡುಕೊಳ್ಳುವಲ್ಲಿ ಕೆಥೊಲಿಕ್ ಸಭಾ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.


ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಶುಭ ಹಾರೈಸಿದರು.


ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಅರಾನ್ಹಾ ಅಧ್ಯಕ್ಷತೆ ವಹಿಸಿದ್ದರು.


2025-26ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ವರದಿ, ವಾರ್ಷಿಕ ಮಹಾಸಭೆಯ ವರದಿ, ವಾರ್ಷಿಕ ಲೆಕ್ಕಪತ್ರ ಮಂಡನೆ, ಮಾನಸ ಸಂಸ್ಥೆ, ಸಶಕ್ತ ಸಮುದಾಯ ಸೇವಾ ಟ್ರಸ್ಟ್ ವರದಿ ಮಂಡಿಸಲಾಯಿತು.


2026- 27ನೇ ಸಾಲಿನ ಕೆಥೊಲಿಕ್ ಸಭಾದ ಡೈರಕ್ಟರಿ ಬಿಡುಗಡೆಗೊಳಿಸಲಾಯಿತು. ದಿ. ಡೆನಿಸ್ ಡಿ'ಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು.


ಅತ್ಯಧಿಕ ಸಹಾಯಧನ ಕೂಪನ್ ವಿತರಣೆ, ಆಮ್ಚೊ ಸಂದೇಶ್ ಜಾಹೀರಾತು ಹಾಗೂ ಚಂದಾದಾರರನ್ನು ಸಂಗ್ರಹಿಸಿದ ಸದಸ್ಯರು ಹಾಗೂ ಘಟಕಗಳನ್ನು ಗೌರವಿಸಲಾಯಿತು. ಅತ್ಯಧಿಕ ಸದಸ್ಯರನ್ನು ನೋಂದಾಯಿಸಿದ ಘಟಕ ಹಾಗೂ ವಲಯಗಳನ್ನು ಸನ್ಮಾನಿಸಲಾಯಿತು.


ಇದೇ ಸಂದರ್ಭದಲ್ಲಿ ನಿವೃತ್ತ ಅಧ್ಯಾಪಕ ಆಲ್ಫೋನ್ಸ್ ಡಿ'ಸೋಜಾ ಅವರ ಸಣ್ಣ ಕಥೆಗಳ ಸಂಗ್ರಹ `ಘಡಿತಾಚೆ ಬುಳ್ಬುಳೆ' ಪುಸ್ತಕ ಅನಾವರಣಗೊಳಿಸಲಾಯಿತು.


ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಚರ್ಚ್ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷ ಜುಲಿಯಾನ್ ರಾಡ್ರಿಗಸ್, ಘಟಕಾಧ್ಯಕ್ಷೆ ಆಗ್ನೆಸ್ ಬರ್ಬೋಜಾ, ಶಾಲಾ ಪ್ರಾಂಶುಪಾಲ ವಂ.ರೊಲ್ವಿನ್ ಅರಾನ್ಹಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಡಿ'ಆಲ್ಮೆಡಾ, ಕೋಶಾಧಿಕಾರಿ ಗ್ಯಾರಿಫೀಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂವಿಸ್ ಡಿ'ಸೋಜಾ, ಸಹಕಾರ್ಯದರ್ಶಿ ಸೋನು ಸಿಕ್ವೇರ, ಸಹ ಕೋಶಾಧಿಕಾರಿ ಪ್ರತಿಮಾ ಡಿ'ಸೋಜಾ, ದಾಂತಿ ಸ್ಮಾರಕ ಟ್ರಸ್ಟ್ ಸಂಚಾಲಕ ಅಲ್ಫೋನ್ಸ್ ಡಿ'ಕೋಸ್ತಾ, ಕುಟುಂಬ ಸದಸ್ಯರಾದ ಚಾರ್ಲ್ಸ್ ದಾಂತಿ, ಮಾನಸ ಸಂಸ್ಥೆ ಅಧ್ಯಕ್ಷ ಜೋನ್ ಮಾರ್ಟಿಸ್, ವಲಯಾಧ್ಯಕ್ಷ ಜೊಯೇಲ್ ಅಲ್ಮೆಡಾ, ಶೈಲಾ ಡಿ. ಅಲ್ಮೆಡಾ, ಜೆರಾಲ್ಡ್ ರೊಡ್ರಿಗಸ್, ಅಂತೋನಿ ಮಿರಾಂದ, ಜೋನ್ ಕಿರಣ್ ಲೂವಿಸ್, ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಎಲ್ರಾಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ಡಾ.ಜೆರಾಲ್ಡ್ ಪಿಂಟೊ ಮೊದಲಾದವರಿದ್ದರು.


ಉಪಾಧ್ಯಕ್ಷೆ ಮೇಬಲ್ ಡಿ'ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಜುಲಿಯೆಟ್ ಡಿ'ಸೋಜಾ ವಂದಿಸಿದರು.