ಮೊಬೈಲ್ ಬದಿಗಿಟ್ಟು ಪುಸ್ತಕ ಓದಿ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.29
ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್​ ಬಳಕೆ ವ್ಯಾಪಕವಾಗಿ ಬೆಳೆಯುತ್ತಿದ್ದು, ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಮೊಬೈಲ್​ ವ್ಯಾಮೋಹವನ್ನು ಸ್ವಲ್ಪ ಬದಿಗಿಟ್ಟು, ಪುಸ್ತಕಗಳ ಕಡೆಗೆ ಮುಖಮಾಡಿ ಓದುವ ಹವ್ಯಾಸ ರೂಢಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ  ಅಬೀದ್​ ಗದ್ಯಾಳ್​ ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ‌ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಮನೆಯೇ ಗ್ರಂಥಾಲಯ ಅಭಿಯಾನದ ಅಂಗವಾಗಿ 200ನೇ ಗ್ರಂಥಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.


ಓದಿನ ಪ್ರೇರಣೆ ನೀಡಿ
ಸರ್ಕಾರಿ ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆಯಾಗಿರುವುದು ಉತ್ತಮ ಬೆಳವಣಿಗೆ. ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಪುಸ್ತಕ ಓದುವಂತೆ ಪ್ರೇರೇಪಿಸಬೇಕು. ಪುಸ್ತಕಗಳನ್ನು ಓದುವ ಮೂಲಕ ಪ್ರತಿಯೊಬ್ಬರೂ ತಮ್ಮ ಜ್ಞಾನ ವೃದ್ಧಿಸಿಕೊಳ್ಳುವ ಜೊತೆಗೆ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮ ಪ್ರೇರಣಾದಾಯಕ ಎಂದರು.


ಮುಖ್ಯ ಅತಿಥಿಗಳಾಗಿ ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಹರಿಶ್ಚಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕ ವಿಶ್ವನಾಥ ಶೆಣೈ, ಸುಹಾಸಂ ಅಧ್ಯಕ್ಷೆ ಸಂಧ್ಯಾ ಶೆಣೈ, ಕಾರ್ಯದರ್ಶಿ ಮುರಳೀಧರ್​, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ್​ ಕೊಡವೂರು‌ ಮತ್ತು ರಂಜನಿ ವಸಂತ್​, ಪದಾಧಿಕಾರಿಗಳಾದ ಆರ್.ವಸಂತ್​, ದೀಪಾ ಚಂದ್ರಕಾಂತ್​, ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಚಂದ್ರಕಾಂತ್​ ಉಪಸ್ಥಿತರಿದ್ದರು.


ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕಾಧ್ಯಕ್ಷ ರವಿರಾಜ್​ ಎಚ್​.ಪಿ. ಪ್ರಸ್ತಾವನೆಗೈದರು. ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.