ಲೋಕಬಂಧು ನ್ಯೂಸ್ | ಉಡುಪಿ, ಜೂ.14
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಮತದಾರರಿಂದ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಕೇಳುವ ಮೂಲಕ ಚುನಾವಣಾ ಆಯೋಗ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಎಸ್ಐಆರ್ ವಿರೋಧಿ ಸಂಘಟನೆ ಉಡುಪಿ ಸಂಚಾಲಕ ಶ್ರೀಧರ್ ಆರೋಪಿಸಿದರು.
ರಾಜ್ಯ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕ್ರಮವನ್ನು ವಿರೋಧಿಸಿ ಸಹಬಾಳ್ವೆ ಸಂಘಟನೆ ಜೂ.13ರಿಂದ 18ರ ವರೆಗೆ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಜಾಗೃತಿ ಜಾಥಾದ ಭಿತ್ತಿಪತ್ರವನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಮತದಾನ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದ್ದು, ಹೆಚ್ಚುವರಿ ದಾಖಲೆಗಳ ಹೆಸರಿನಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಅಪಾಯವಿದೆ. ವಿಶೇಷವಾಗಿ ಬಡವರು, ಗ್ರಾಮೀಣ ಪ್ರದೇಶದ ಜನರು, ವಲಸೆ ಕಾರ್ಮಿಕರು ಹಾಗೂ ಅಂಚಿನ ಸಮುದಾಯಗಳ ಮೇಲೆ ಈ ಕ್ರಮ ಪ್ರತಿಕೂಲ ಪರಿಣಾಮ ಬೀರಬಹುದು.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಆದರೆ, ಪೌರತ್ವ ಸಾಬೀತುಪಡಿಸುವ ಹೊಣೆಗಾರಿಕೆಯನ್ನು ಮತದಾರರ ಮೇಲೆ ಹಾಕುವುದು ಅಸಂವಿಧಾನಿಕವಾಗಿದೆ. ಚುನಾವಣಾ ಆಯೋಗ ತನ್ನ ಸಂವಿಧಾನಬದ್ಧ ಅಧಿಕಾರದ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದವರು ಹೇಳಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ. ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಕ್ರಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಚುನಾವಣಾ ಆಯೋಗ ತನ್ನ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಾಲಯಗಳೂ ಬಡ ಮತ್ತು ದುರ್ಬಲ ವರ್ಗಗಳ ನೆರವಿಗೆ ಬರುವ ಸ್ಥಿತಿಯಲ್ಲಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿವಾದಾತ್ಮಕ ಕ್ರಮವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಹಾಗೂ ಯಾವುದೇ ಮತದಾರರ ಹಕ್ಕಿಗೆ ಧಕ್ಕೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಶ್ರೀಧರ್, ಎಸ್ಐಆರ್ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆಗಳನ್ನು ಬಡವರು, ನಿರಾಶ್ರಿತರು ಮತ್ತು ದುರ್ಬಲ ವರ್ಗದ ಜನರಿಗೆ ಒದಗಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು. ದಾಖಲೆಗಳ ಕೊರತೆಯಿಂದ ಯಾರೊಬ್ಬರೂ ಮತದಾನದ ಹಕ್ಕು ಕಸಿದುಕೊಳ್ಳುವಂತಾಗಬಾರದು ಎಂದರು.
ಐದು ಮಾರ್ಗಗಳಲ್ಲಿ ಜಾಗೃತಿ ಜಾಥಾ
ಎಸ್ಐಆರ್ ಜಾಗೃತಿ ಜಾಥಾ ಕುರಿತು ಮಾಹಿತಿ ನೀಡಿದ ಸಹಬಾಳ್ವೆ ಸಂಘಟನೆಯ ಪ್ರೊ.ಕೆ. ಫಣಿರಾಜ್, ರಾಜ್ಯದ ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ ಐದು ಮಾರ್ಗಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ.
ಮಾರ್ಗ 1ರಲ್ಲಿ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳು. ಮಾರ್ಗ 2ರಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳು ಒಳಗೊಂಡಿವೆ.
ಮಾರ್ಗ 3ರಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳು. ಮಾರ್ಗ 4ರಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳು ಸೇರಿವೆ. ಮಾರ್ಗ 5ರಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜಾಥಾ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಎಸ್ಐಆರ್ ವಿರೋಧಿ ಸಂಘಟನೆಯ ಪ್ರಮುಖರಾದ ಪ್ರಶಾಂತ್ ಜತ್ತನ್ನ, ಶ್ರೀಧರ್ ಬಿಲ್ಲವ, ಸುಂದರ್ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಇಸ್ಮಾಯಿಲ್ ಚೇರ್ಕಾಡಿ, ಇದ್ರಿಸ್ ಹೂಡೆ ಮೊದಲಾದವರಿದ್ದರು.
