ಎಸ್ಐಆರ್:ಬಿಎಲ್ಓಗಳ ಮನೆ ಮನೆ ಭೇಟಿ-ಜಿಲ್ಲಾಧಿಕಾರಿ ಪರಿಶೀಲನೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.30
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆ ಮನೆಗಳಿಗೆ ಭೇಟಿ ನೀಡಿ, ಎನುಮರೇಷನ್ ಫಾರ್ಮ್ ವಿತರಿಸಿ, ಮತದಾರರ ವಿವರ ಕಲೆಹಾಕುತ್ತಿದ್ದು ನಗರದ ಇಂದ್ರಾಳಿ, ಕುಂಜಿಬೆಟ್ಟು, ಕಾಡಬೆಟ್ಟು, ಪಣಿಯಾಡಿ ಮತ್ತಿತರ ಕಡೆಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂರ್ಭದಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಎಲ್ಲಾ ಅರ್ಹ ನಾಗರಿಕರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಮುಖ್ಯ ಉದ್ದೇಶ ಹೊಂದಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದರು.


ಈಗಾಗಲೇ ಪೂರ್ವಸಿದ್ಧತಾ ಕಾರ್ಯಗಳ ಪ್ರಕ್ರಿಯೆ ನಡೆದಿವೆ. ಜೂ.30ರಿಂದ ಜು.29ರ ವರೆಗೆ ಬಿಎಲ್ಒಗಳು ಮನೆ ಮನೆ ಸಮೀಕ್ಷೆ ಭೇಟಿ ನೀಡಿ ಎನುಮರೇಷನ್ ಫಾರ್ಮ್ ನೀಡಿ ಭರ್ತಿ ಮಾಡಲಾದ ಗಣತಿ ನಮೂನೆಗಳನ್ನು ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲಿದ್ದಾರೆ. ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕರಿಸಬೇಕು. ಭರ್ತಿ ಮಾಡಿದ ಫಾರ್ಮ್'ಗಳಿಗೆ ಮತದಾರರ ಸಹಿ ಅಥವಾ ಹೆಬ್ಬೆರಳ ಗುರುತು ಕಡ್ಡಾಯವಾಗಿ ಇರಬೇಕು ಎಂದರು.


ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆ ಬಗ್ಗೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆ.5ರಿಂದ ಸೆ.4ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆ.5ರಿಂದ ಅ.3ರ ವರೆಗೆ ಅವುಗಳ ವಿಲೇವಾರಿ ನಡೆಸಿ ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು. ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್ ಇದ್ದರು.


ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ
ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮೊಹಮ್ಮದ್ ಮೌಲಾ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಶೀಲಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಇಂದು ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮಾಹಿತಿ ಹಂಚಿಕೊಂಡು, ಎನುಮರೇಷನ್ ಅರ್ಜಿ ನೀಡಿದ್ದಾರೆ. ಅದನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವ ಜೊತೆಗೆ ಮತದಾರರ ಪಟ್ಟಿಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಹೆಸರು ನೋಂದಣಿಯಾಗಿದೆಯೇ ಎಂದು ಪರಿಶೀಲಿಸಿದ್ದೇನೆ. ಪ್ರತಿಯೊಬ್ಬ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮೊಹಮ್ಮದ್ ಮೌಲಾ ತಿಳಿಸಿದರು.
ಶತಾಯುಷಿಗಳಾದ ಕಲ್ಯಾಣಪುರ ಪ್ರೆಸಿಲ್ಲಾ ಡಿ'ಸೋಜ ಮತ್ತು ಅನಂತೇಶ್ವರ ಶಾಲೆ ಸಮೀಪದ ಪಿ.ಆನಂದ ರಾವ್ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಶೀಲಿಸಿದರು.


ಮನೆ ಮನೆ ಭೇಟಿ
ಸಗ್ರಿ ವಾರ್ಡ್ ಬಿ.ಎಲ್.ಓ ಪ್ರಮೋದಾ ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಪ್ರತೀ ಮನೆಗೂ ಭೇಟಿ ನೀಡಿ, ಆ ಮನೆಯ ಮತದಾರರಿಗೆ ಗಣತಿ ನಮೂನೆಯ ಎರಡು ಪ್ರತಿಗಳನ್ನು ನೀಡುತ್ತಿದ್ದು ಮತದಾರರು ಎರಡನ್ನೂ ಭರ್ತಿ ಮಾಡಿ, ನಂತರ ಭಾವಚಿತ್ರ ಅಂಟಿಸಿ ಸಹಿ ಮಾಡಬೇಕು. ಒಂದು ಪ್ರತಿಯನ್ನು ಅಧಿಕಾರಿಗೆ ನೀಡಿ, ಮತ್ತೊಂದನ್ನು ಹಿಂಬರಹ ಪಡೆದು ಸಂಗ್ರಹಿಸಿಟ್ಟುಕೊಳ್ಳಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರಿಗೂ ಇದೇ ನಿಯಮ ಅನ್ವಯವಾಗಲಿದೆ ಎಂದರು.


ನಾವು ಮನೆಗಳಿಗೆ ಭೇಟಿ ನೀಡಿದಾಗ ಮನೆ ಮಂದಿಯ ಗಣತಿ ನಮೂನೆ ಸ್ವೀಕರಿಸಿದರೆ ಅಂಥ ಮನೆಗಳಿಗೆ ನೇರಳೆ ಬಣ್ಣದ ಚೌಕಾಕಾರದ ಸ್ಟಿಕರ್ ಹಾಗೂ ಮನೆ ಮಂದಿ ಅಲಭ್ಯವಾಗಿದ್ದರೆ ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್ ಅಂಟಿಸಲಾಗುವುದು. ಮತದಾರದಿಂದ ಸಂಗ್ರಹಿಸಲಾದ ಅರ್ಜಿ ನಮೂನೆಯನ್ನು ಆನ್ ಲೈನ್'ನಲ್ಲಿ ಅಪ್'ಲೋಡ್ ಮಾಡಲಾಗುವುದು ಎಂದರು.