ಲೋಕಬಂಧು ನ್ಯೂಸ್ | ಉಡುಪಿ, ಜೂ.30
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಆರಂಭವಾಗಿದ್ದು, ಅರ್ಹ ಪ್ರತೀ ಭಾರತೀಯ ಮತದಾನದಲ್ಲಿ ಭಾಗವಹಿಸಬೇಕೆಂಬುದು ಈ ಅಭಿಯಾನದ ಮುಖ್ಯ ಆಶಯ. ಈ ನಿಟ್ಟಿನಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಎಲ್ಲರೂ ಸ್ವಾಗತಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಷ್ಟ್ರ ವಿರೋಧಿಗಳಿಗೆ ಕಡಿವಾಣ ಹಾಕುವುದೇ ಎಸ್ಐಆರ್ ಉದ್ದೇಶ ಎಂದವರು ಪ್ರತಿಪಾದಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಬಾಗಿಲಿಗೆ ಬಿಎಲ್ಓ ಮತ್ತು ಬಿಎಲ್ 2 ಬಂದಾಗ ಎಲ್ಲಾ ವಿವರ ಕೊಡಬೇಕು ಎಂದು ಮನವಿ ಮಾಡಿದರು.
ಬಾಂಗ್ಲಾ ದೇಶದ ಜನ ಭಾರತಕ್ಕೆ ಬಂದು ನಮ್ಮ ವ್ಯವಸ್ಥೆಯಲ್ಲಿ ಮತದಾನ ಮಾಡಬೇಕೇ ಎಂಬುದನ್ನು ಎಸ್ಐಆರ್'ನ್ನು ಟೀಕಿಸುವರು ಮೊದಲು ಯೋಚಿಸಬೇಕು. ಈ ಕೆಟ್ಟ ಪರಂಪರೆಗೆ ಎಸ್ಐಆರ್ ವಿದಾಯ ಹೇಳುತ್ತದೆ. ಕಾಂಗ್ರೆಸ್‌ನವರು ಇದು ಪ್ರಜಾಪ್ರಭುತ್ವಕ್ಕೆ ಕಂಟಕ ಎಂದು ಹೇಳುತ್ತಾರೆ. ಆದರೆ, ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ವ್ಯವಸ್ಥೆ ಎಂದು ಕೋಟ ಸಮರ್ಥಿಸಿಕೊಂಡರು.
ರಾಷ್ಟ್ರ ವಿರೋಧಿಗಳು, ಭಯೋತ್ಪಾದಕರು, ದೇಶಕ್ಕೆ ಅನ್ಯಾಯ ಮಾಡುವವರಿಗೆ ಕಡಿವಾಣ ಹಾಕಬೇಕಾಗಿದೆ. ಆದ್ದರಿಂದ ಎಸ್ಐಆರ್ ವಿರೋಧಿಸುವ ಮೂಲಕ ಗೊಂದಲಕ್ಕೆ ಅವಕಾಶ ಕೊಡಬೇಡಿ ಎಂದು ಕಾಂಗ್ರೆಸ್‌ನವರಿಗೆ ಕಿವಿಮಾತು ಹೇಳಿದರು.
ಅಧಿಕೃತ ವಾಸ್ತವ್ಯ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆ ಮೂಲಕ ಕೊಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ವಾಸ್ತವ್ಯ ದೃಢೀಕರಣ ಪತ್ರ, ಮತಪಟ್ಟಿ ಪರಿಷ್ಕರಣೆಯಲ್ಲಿ ವಿದೇಶಿ ಮತದಾರರಿಗೂ ಅನುಕೂಲ ಮಾಡಬಹುದು. ಅದನ್ನು ಇಟ್ಟುಕೊಂಡು ಕಾಂಗ್ರೆಸ್ ತನ್ನ ಮತವನ್ನು ಉಳಿಸಿಕೊಳ್ಳಲು ಮುಂದಾಗಿದೆ. ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಚಿಂತನೆಯೂ ನಡೆದಿದೆ. ನಕಲಿ ಮತ ಸಾಬೀತಾದರೆ ಅಧಿಕಾರಿಗಳು ಹೊಣೆಯಾಗುತ್ತಾರೆ. ಆದ್ದರಿಂದ ಎಸ್ಐಆರ್ ವಿಚಾರದಲ್ಲಿ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಬೇಡಿ ಎಂದು ಎಚ್ಚರಿಸಿದ ಸಂಸದ ಕೋಟ, 10ಕ್ಕೂ ದಾಖಲೆಗಳನ್ನು ನೀಡಲು ಅವಕಾಶ ಇದೆ ಎಂದರು.
ಪ್ರದೀಪ್- ಕುಮಾರಸ್ವಾಮಿ ಕಚ್ಚಾಟ
ಶಾಸಕ ಪ್ರದೀಪ್ ಈಶ್ವರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಕಚ್ಚಾಟ ವಿಚಾರವನ್ನು ಪ್ರಸ್ತಾಪಿಸಿದ ಕೋಟ, ಚಪ್ಪಲಿ ಎಸೆದದ್ದು ತಪ್ಪು. ಅದನ್ನು ಸಮರ್ಥಿಸುವುದಿಲ್ಲ. ಆದರೆ, ಆಡಳಿತ ಪಕ್ಷದ ಶಾಸಕ ಪ್ರಚೋದನೆ ನೀಡುವುದು ಎಷ್ಟು ಸರಿ? ಕಾರಿನ ಮೇಲೆ ನಿಂತು ತೊಡೆ ತಟ್ಟಿ ಭುಜ ತಟ್ಟಿ ಪ್ರಚೋದಿಸುವುದು ಸರಿಯೇ ಎಂಬುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಬೇಕು. ಗೂಂಡಾಗಿರಿ ನಿಯಂತ್ರಣ ಹೇಗೆ ಸಾಧ್ಯ? ನಿಮ್ಮ ಶಾಸಕರನ್ನು ಕರೆದು ಬುದ್ಧಿ ಹೇಳಿ ಎಂದ ಕೋಟ, ಸ್ವಯಂ ಪ್ರೇರಿತರಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಕೇಸು ಹಾಕಲಾಗಿದೆ. ಆದರೆ, ಪ್ರಚೋದನೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಗೃಹಮಂತ್ರಿ ರಾಜಧರ್ಮ ಪಾಲಿಸಬೇಕಾಗಿದೆ. ದೂರು ಕೊಟ್ಟರೆ ಕೇಸು ದಾಖಲಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಡಾ.ಪರಮೇಶ್ವರ್ ಇದ್ದಾಗ ಹೀಗಾಗುತ್ತಿರಲಿಲ್ಲ ಎಂದರು.
ಡಿವಿ ಆಡಿಯೋ ವಿಚಾರ
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಡಿಯೋ ಸಂಚಲನ ವಿಚಾರದಲ್ಲಿ ಮಾತನಾಡಿ, ಮಾಧ್ಯಮಗಳಿಂದ ಆ ಬಗ್ಗೆ ತಿಳಿದುಕೊಂಡಿದ್ದೇನೆ. ಸದಾನಂದ ಗೌಡ ನಾನು ಮಾತನಾಡಿಲ್ಲ ಎಂದಿದ್ದಾರೆ. ಹಾಗಾಗಿ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಅಡ್ಡ ಮತದಾನ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಯಾಗಿದೆ. ಕೇಂದ್ರ ನಾಯಕತ್ವ ಎಲ್ಲಾ ವಿವರ ಪಡೆದುಕೊಂಡಿದೆ. ಧರ್ಮಸ್ಥಳದಲ್ಲಿ ಬೇಲೂರು ಶಾಸಕ ಆಣೆ ಪ್ರಮಾಣ ಮಾಡುವ ಮೂಲಕ ಅವರ ಭಾವನೆಯನ್ನು ಹೇಳಿಕೊಂಡಿದ್ದಾರೆ. ನನ್ನದೇನು ತಪ್ಪಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಅವರ ಭಾವನೆ ಹೇಳುವ ಅವಕಾಶ ಇದೆ ಎಂದರು.
ಅಯೋಧ್ಯೆ ಶ್ರೀರಾಮ ಮಂದಿರ ಹುಂಡಿ ಹಗರಣ ವಿಚಾರದಲ್ಲಿ ಯಾರು ಕೂಡಾ ಮೌನ ಇಲ್ಲ. ರಾಮ ಮಂದಿರ ಹಿಂದೂಗಳ ಪವಿತ್ರ ಸ್ಥಳ. ಆರ್ಥಿಕ ಶಕ್ತಿ ಹರಿದು ಬರುವ ಸ್ಥಳ. ರಾಮ ಮಂದಿರದಲ್ಲಿ ಹಗರಣ ನಡೆದಿರುವುದು ದೇಶ, ಬಿಜೆಪಿ ಹಾಗೂ ಸಂಘ ಪರಿವಾರಕ್ಕೂ ನೋವುಂಟು.ಮಾಡಿದೆ ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ವಿಧಿಸುವುದಾಗಿ ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ ಎಂದರು.
ಆರ್.ಎಸ್ಎಸ್ ನೋಂದಣಿ
ನಾವು- ನೀವು ಹುಟ್ಟುವ ಮುಂಚೆಯೇ ಆರ್.ಎಸ್ಎಸ್ ಶತಮಾನದ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಕೇವಲ ಜನಪರ ರಾಷ್ಟ್ರಪ್ರೇಮದ ಪ್ರತೀಕವಾಗಿ ಕೆಲಸ ಮಾಡುವ ಸಂಘ. ಪ್ರಿಯಾಂಕ ಖರ್ಗೆ ಕಾಲದಲ್ಲೇ ನೋಂದಣಿ ಆಗಬೇಕೆಂದು ಶಾಸನ ಇದೆಯಾ ಎಂದು ಪ್ರಶ್ನಿಸಿದ ಸಂಸದ ಕೋಟ, ಜಾತಿ- ಧರ್ಮಕ್ಕಿಂತ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರ ಸಂಘ, ನೆಹರೂ ಅವರಿಂದ ಮೆಚ್ಚುಗೆ ಪಡೆದ ಸಂಘಟನೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಮವಸ್ತ್ರ ಸಹಿತ ಭಾಗವಹಿಸಿದ ಇತಿಹಾಸ ಇದೆ.
ಆದರೆ, ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಇದನ್ನೆಲ್ಲ ಮರೆತಿದ್ದಾರೆ. ಆರ್.ಎಸ್ಎಸ್ ನೋಂದಣಿ ಬಗ್ಗೆ ನಿಮಗೆ ತಲೆಬಿಸಿ ಬೇಡ, ಮಾಡಿಕೊಳ್ಳುವವರು ಮಾಡಿಕೊಳ್ಳುತ್ತಾರೆ ಎಂದು ಕೋಟ ಸಲಹೆ ನಿಡಿದರು. ರಾಜ್ಯದ 500 ಕಡೆಗಳಲ್ಲಿ ಆರ್.ಎಸ್ಎಸ್ ಪಥಸಂಚಲನ ನಡೆದಿದೆ. ಎಲ್ಲೂ ಗೊಂದಲಕ್ಕೆ ಅವಕಾಶ ಕೊಟ್ಟಿಲ್ಲ ಎಂಬುದನ್ನು ಗೃಹಸಚಿವ ಖರ್ಗೆ ಗಮನಿಸಬೇಕು ಎಂದು ಸಂಸದ ಕೋಟ ತಿಳಿಸಿದರು.
