ಸರಕು ಸಾಗಾಟ ವಾಹನಗಳಿಗೆ ಸ್ಪೀಡ್ ಗವರ್ನರ್ ಕಡ್ಡಾಯ

ಲೋಕಬಂಧು ನ್ಯೂಸ್ | ಮಣಿಪಾಲ, ಜೂ.29
ಸಾರ್ವಜನಿಕ ವಾಹನಗಳು ಸುರಕ್ಷಿತ ಹಾಗೂ ಸುಗಮವಾಗಿ ರಸ್ತೆಗಳಲ್ಲಿ ಸಂಚರಿಸಲು ಅಗತ್ಯವಿರುವ ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ವಹಣೆ ಜೊತೆಗೆ ಸರಕು ಸಾಗಾಟ ವಾಹನಗಳಿಗೆ ಪ್ರತೀ ಗಂಟೆಗೆ 60 ಕಿ.ಮೀ. ವೇಗ ಮಿತಿಯ ಸ್ಪೀಡ್ ಗವರ್ನರ್'ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಅಧಿಕಾರಿಗಳಿಗೆ ಸೂಚಿಸಿದರು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯೊಳಗೆ ಸಂಚರಿಸುವ 6 ಚಕ್ರ ಮತ್ತು ಮೇಲ್ಪಟ್ಟ ಎಲ್ಲಾ ಸರಕು ಸಾಗಾಟ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಲು, ಓವರ್ ಲೋಡ್ ಮಾಡಿದ ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳಿಂದಾಗಿ ಎಲ್ಲೆಡೆ ರಸ್ತೆಗೆ ಕಾಂಕ್ರಿಟ್ ಬಿದ್ದು ರಸ್ತೆ ಹಾಳಾಗುವುದು ಹಾಗೂ ಮರಳು ಸಾಗಾಟ ವಾಹನಗಳ ಓವರ್ ಲೋಡ್'ನಿಂದ ತೊಂದರೆ ಉಂಟಾಗುವ ಜೊತೆಗೆ ಅಪಘಾತಗಳು ಹೆಚ್ಚುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದು, ಅದರ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಿದರು.


ಸಾರ್ವಜನಿಕರು ವಾಹನ ಚಾಲನೆ ಸಂದರ್ ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಿದ್ದಲ್ಲಿ ರಸ್ತೆ ಅಪಘಾತವಾಗುವುದನ್ನು ತಪ್ಪಿಸಲು ಸಾಧ್ಯ. ಅಜಾಗರೂಕತೆ, ನಿರ್ಲಕ್ಷ್ಯ ಹಾಗೂ ವೇಗದ ಚಾಲನೆ ಸರಿಯಲ್ಲ. ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದರು.


ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರಕಾರಿ ಬಸ್'ಗಳಲ್ಲಿ ಕಡ್ಡಾಯವಾಗಿ ಬಾಗಿಲು ಅಳವಡಿಸುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಸಂಚರಿಸುವ ಬಸ್'ಗಳ ಸಂಖ್ಯೆ, ಅವುಗಳಲ್ಲಿ ಡೋರ್ ಅಳವಡಿಸಿರುವ ಹಾಗೂ ಅಳವಡಿಸದೇ ಇರುವ ಬಸ್'ಗಳ ಸಂಖ್ಯೆ ಹಾಗೂ ಅಳವಡಿಸದೇ ಇರುವ ಬಸ್'ಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರದೊಳಗೆ ಮಾಹಿತಿ ನೀಡುವಂತೆ ಹಾಗೂ ಡೋರ್ ಅಳವಡಿಸಿದಲ್ಲಿ ಮಾತ್ರ ವಾಹನಗಳ ಫಿಟ್ನೆಸ್ ನವೀಕರಣ ಮಾಡಲು ಸೂಚಿಸಿದರು.


ಶಾಲಾ-ಕಾಲೇಜು ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕ, ಹಂಪ್'ಗಳು, ವೇಗತಡೆ, ಬ್ಯಾರಿಕೇಡ್, ಝೀಬ್ರಾ ಪಟ್ಟಿ ಮತ್ತಿತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಇಲಾಖೆ ಹಂತದಲ್ಲಿಯೇ ನಿರ್ಣಯ ಕೈಗೊಂಡು ಅನುಷ್ಠಾನಗೊಳಿಸಬೇಕು. ಪ್ರಯಾಣಿಕರು ಬಸ್'ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಪೂರಕವಾಗಿ ಕಸ, ನೀರಿನ ಬಾಟೆಲ್ ಇತ್ಯಾದಿ ಎಸೆಯಲು ಬಸ್'ನಲ್ಲಿಯೇ ಕಸದ ಬುಟ್ಟಿ ಅಳವಡಿಸಲು ಸೂಚಿಸಲಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನ ಆಗಿಲ್ಲ. ಆ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.


ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಿರುವ 18 ಕಪ್ಪುಚುಕ್ಕೆ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಉಳಿದ ಪ್ರದೇಶಗಳಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜನಸಂಚಾರ ದಟ್ಟಣೆ ಇರುವ ನಗರ ಭಾಗದಲ್ಲಿ ವಾಹನಗಳ ಪಾರ್ಕಿಂಗ್'ಗೆ ಅವಕಾಶ ನೀಡಬಾರದು. ಜೊತೆಗೆ ರಸ್ತೆ ಬದಿಯ ಅನಧಿಕೃತ ಗೂಡಂಗಡಿ, ಫಾಸ್ಟ್ ಫುಡ್ ಅಂಗಡಿ, ತಳ್ಳುಗಾಡಿಗಳನ್ನು ತೆರವುಗೊಳಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ವೆಂಡಿಗ್ ಝೋನ್'ಗಳನ್ನು ಗುರುತಿಸಿ, ಬದಲಿ ವ್ಯವಸ್ಥೆ ಕಲ್ಪಿಸುವಂತೆ ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು.


ಜಿಲ್ಲೆಯಲ್ಲಿ ಸಂಚರಿಸುವ ಬಸ್'ಗಳು ಬಸ್ ನಿಲ್ದಾಣ ಹೊರತುಪಡಿಸಿ ಇತರೆಡೆ ಜನರನ್ನು ಹತ್ತಿಸಿಕೊಳ್ಳಲು ಬಸ್ ನಿಲ್ಲಿಸಿದಲ್ಲಿ ಅಂಥ ಬಸ್'ಗಳ ವಿರುದ್ಧ ಕ್ರಮ ಜರುಗಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚುವರಿ ಮೀಡಿಯನ್ ಓಪನಿಂಗ್'ಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಸಮೀಕ್ಷೆ ನಡೆಸಿ, ನಿಯಮಾನುಸಾರ ಅವಶ್ಯಕತೆಗಳನ್ನು ಆಧರಿಸಿ ನಿರ್ಧರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ ಮೊದಲಾದವರಿದ್ದರು.