ಲೋಕಬಂಧು ನ್ಯೂಸ್ | ಉಡುಪಿ, ಜೂ.14
ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳ ಮರು ಪರಿಶೀಲನೆ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಡಿ ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಪ್ರಯೋಜನ ನೀಡುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಈಗ ಫಲಾನುಭವಿಗಳ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಿ, ಅಗತ್ಯವಿದ್ದರೆ ಮರು ಅರ್ಜಿ ಸಲ್ಲಿಸುವಂತೆ ಸೂಚಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಬೆಳವಣಿಗೆಯಿಂದ ಈಗಾಗಲೇ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಲ್ಲಿ ಆತಂಕ ಉಂಟಾಗಿದೆ ಎಂದವರು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಸಚಿವ ಸಂಪುಟದ ಸಮಾನ ಸ್ಥಾನಮಾನ ಹೊಂದಿರುವ ಅಧ್ಯಕ್ಷರನ್ನೂ ನೇಮಕ ಮಾಡಲಾಗಿದೆ. ಇಷ್ಟೆಲ್ಲಾ ವ್ಯವಸ್ಥೆಗಳಿದ್ದರೂ ಮರು ಪರಿಶೀಲನೆಯ ಅಗತ್ಯ ಎದುರಾಗಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ ಎಂದು ಸಂಸದ ಕೋಟ ಟೀಕಿಸಿದರು.
ಗೃಹಲಕ್ಷ್ಮೀ ಯೋಜನೆಯನ್ನು ಹಂತಹಂತವಾಗಿ ಸೀಮಿತಗೊಳಿಸುವ ಅಥವಾ ಸ್ಥಗಿತಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ಫಲಾನುಭವಿಗಳಲ್ಲಿ ಮೂಡಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಹಿಂಪಡೆಯುವ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆಯೇ ಎಂಬ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು ಎಂದವರು ಒತ್ತಾಯಿಸಿದರು.
ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಕೋಟ ಶ್ರೀನಿವಾಸ ಪೂಜಾರಿ, ಈ ಬೆಳವಣಿಗೆಗಳನ್ನು ಬಿಜೆಪಿ ಗಂಭೀರವಾಗಿ ಗಮನಿಸುತ್ತಿದೆ ಎಂದರು.
ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಕೆಲವು ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೋಟ, ಸರ್ಕಾರ ಇನ್ನೂ ಸಂಪೂರ್ಣವಾಗಿ 'ಟೇಕಾಫ್' ಆಗಿಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಗಳು ಸಂಪುಟದ ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಮುನ್ನಡೆಸುವುದು ಪ್ರಜಾಪ್ರಭುತ್ವದ ರೂಢಿಯಾಗಿದೆ. ಆದರೆ, ಸಚಿವರ ಅಸಮಾಧಾನ ಬಹಿರಂಗವಾಗುತ್ತಿರುವುದು ಸರ್ಕಾರದ ಒಳಗಿನ ಸಮಸ್ಯೆಗಳನ್ನು ಬಯಲಿಗೆಳೆಯುತ್ತಿದೆ.
ಇದು ಕೇವಲ ವಿಪಕ್ಷದ ಟೀಕೆಯಲ್ಲ, ಸರ್ಕಾರದ ಕಾರ್ಯವೈಖರಿಯ ಮೇಲೆ ನಿಗಾ ಇಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.