ಲೋಕಬಂಧು ನ್ಯೂಸ್ | ಉಡುಪಿ, ಜೂ.23
ರೌಡಿ ಶೀಟರ್'ಗಳಾದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ ಮತ್ತು ಕರಾಣಿ ಮುಸೀನ್ ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ ಎಂಬವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಗಡಿಪಾಡು ಆದೇಶ ಹೊರಡಿಸಿದ್ದಾರೆ.
ಕುಂದಾಪುರ ಗುಲ್ವಾಡಿ ಮಾವಿನಕಟ್ಟೆ ನಿವಾಸಿ ಮೊಹಮ್ಮದ್ ದಾನೀಶ್ ಮದನಿ (23) ವಿರುದ್ಧ 8 ಪ್ರಕರಣ ದಾಖಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಕುಂದಾಪುರ ಕಾವ್ರಾಡಿ ಕಂಡ್ಲೂರು ನಿವಾಸಿ ಕರಾಣಿ ಮುಸೀನ್ (44) ವಿರುದ್ಧ 7 ಪ್ರಕರಣ ದಾಖಲಾಗಿದ್ದು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಾದೂರು ಜನತಾ ಕಾಲನಿ ನಿವಾಇಸ ಇಲಿಯಾಸ್ (36) ವಿರುದ್ಧ 15 ಪ್ರಕರಣ ದಾಖಲಾಗಿದ್ದು, ಶಿರ್ವ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ.
ಗಡಿಪಾರು ಕ್ರಮಕ್ಕೆ ಒಳಗಾದ ಮೂವರೂ ಕೊಲೆ, ಕೊಲೆ ಯತ್ನ, ಪೊಲೀಸ್ ಠಾಣೆಗೆ ಕಲ್ಲೆಸೆತ, ಕನ್ನ- ಕಳವು, ಜಾನುವಾರು ಕಳವು, ಜಾನುವಾರು ಹತ್ಯೆ, ರೌಡಿಸಂ ಪ್ರವೃತ್ತಿಯ ಹಲ್ಲೆ ಮುಂತಾದ ಪ್ರಕರಣಗಳ ಸಹಿತ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಮೊಹಮ್ಮದ್ ದಾನೀಶ್ ಮದನಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ, ಕರಾಣಿ ಮುಸೀನ್'ನನ್ನು ಬೀದರ್ ಜಿಲ್ಲೆಯ ಗಾಂಧಿ ಗಂಝ್ ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಇಲಿಯಾಸ್'ನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಅಕ್ರಮ ಚಟುವಟಿಕೆ ಹಾಗೂ ರೌಡಿಸಮ್ ಮಟ್ಟಹಾಕುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಮೂವರ ಆಸಾಮಿಗಳ ವಿರುದ್ಧ ಮಾದಕ ದ್ರವ್ಯ ಸಾಗಾಟ ತಡೆ ಕಾಯ್ದೆ ಹಾಗೂ 4 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾಗೃಹದಲ್ಲಿರಿಸಲಾಗಿದೆ. ಅಲ್ಲದೆ, 14 ಮಂದಿಯ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.