ಅಪ್ರಾಪ್ತ ಬಾಲಕನ ಅಪಹರಣ: ಈರ್ವರ ಸೆರೆ

ಲೋಕಬಂಧು ನ್ಯೂಸ್ ಬ್ರಹ್ಮಾವರ, ಜು.2
ಬ್ರಹ್ಮಾವರ ಮೂಲದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೇರಳಕ್ಕೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಬಾಲಾಪರಾಧಿಯನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.


ಪ್ರಕರಣದ ಆರೋಪಿಗಳಾದ ವಾರಂಬಳ್ಳಿ ಸಾಲಿಕೇರಿ ನಿವಾಸಿ ವಿಖ್ಯಾತ್ ಆಚಾರ್ಯ (19) ಮತ್ತು ಮಟಪಾಡಿ ನಿವಾಸಿ ಸುಚಿತ್ ನಾಯಕ್ (20) ಎಂಬೀರ್ವರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ಪ್ರಕರಣದಲ್ಲಿ ಭಾಗಿಯಾಗಿರುವ ಮೂರನೇ ಆರೋಪಿ ಬಾಲಾಪರಾಧಿಯಾಗಿದ್ದು, ಆತನನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.


ಬ್ರಹ್ಮಾವರ ನಿವಾಸಿಯಾದ ಅಪ್ರಾಪ್ತ ಬಾಲಕನನ್ನು ಜೂ.1ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಆರೋಪಿಗಳು ಅಪಹರಿಸಿ, ಕೇರಳದ ತಲಪಾಡಿ ಸಮೀಪದ ಕುಂಜತ್ತೂರು ಪದವು ಪ್ರದೇಶದಲ್ಲಿರುವ ವುಡ್ ಕಂಪನಿಗೆ ಬಲವಂತವಾಗಿ ಕೆಲಸಕ್ಕೆ ಸೇರಿಸಿದ್ದರು.


ಬಾಲಕ ಮನೆಗೆ ತೆರಳುವುದಾಗಿ ತಿಳಿಸಿದರೂ ಜೂ. 9ರಂದು ಮಧ್ಯಾಹ್ನ ಸುಮಾರು 1.30ಕ್ಕೆ ಆರೋಪಿಗಳ ಪೈಕಿ ಸುಚಿತ್ ನಾಯಕ್ ವೈರ್‌ನಿಂದ ಹಲ್ಲೆ ನಡೆಸಿದ್ದು, ವಿಖ್ಯಾತ್ ಆಚಾರ್ಯ ಕೈಯಲ್ಲಿದ್ದ ಚೂರಿ ತೋರಿಸಿ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಕೃತ್ಯವನ್ನು ಮತ್ತೋರ್ವ ಆರೋಪಿ ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಲಾಗಿದೆ