ಲೋಕಬಂಧು ನ್ಯೂಸ್ ಉಡುಪಿ, ಜು.2
ಕೇವಲ ಚುನಾವಣೆಯಲ್ಲಿ ಗೆಲುವಲ್ಲುವುದೇ ಬಿಜೆಪಿ ಗುರಿ ಅಲ್ಲ. ವಿಚಾರದಡಿ ಚುನಾವಣೆ ಎದುರಿಸಿ ಉತ್ತಮ ಗೆಲುವು ಸಾಧಿಸುವುದು, ರಾಷ್ಟ್ರೀಯ ವಿಚಾರಧಾರೆಯ ಮೂಲಕ ದೇಶ ಮೊದಲು ಎಂಬ ಚಿಂತನೆಯೊಂದಿಗೆ ಭಯ ಮುಕ್ತ ರಾಷ್ಟ್ರ ನಿರ್ಮಾಣ, ವಿಕಸಿತ ಭಾರತ ಪರಿಕಲ್ಪನೆಯೊಂದಿಗೆ ವಿಶ್ವ ಗುರು ಭಾರತ ಬಿಜೆಪಿ ಗುರಿಯಾದೆ. ಈ ನಿಟ್ಟಿನಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ತತ್ವಗಳಡಿ ಸಾಕಾರಗೊಂಡಿರುವ ಕೇಂದ್ರ ಸರಕಾರದ 12 ವರ್ಷಗಳ ಐತಿಹಾಸಿಕ ಸಾಧನೆ ಮತ್ತು ಜನಪರ ಯೋಜನೆಗಳನ್ನು ಸಮಾಜದಲ್ಲಿ ಪ್ರಚುರಗೊಳಿಸುವ ಜೊತೆಗೆ ಸದೃಢ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದರು.ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ'ಸೋಜಾ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ, ನಿಯುಕ್ತಿ ಪತ್ರ ವಿತರಿಸಿ ಮಾತನಾಡಿದರು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದಲ್ಲಿ ಧರ್ಮ ಗುರುಗಳು, ಧರ್ಮ ಭಗಿನಿಯರು ಮತ್ತು ಸಮುದಾಯದ ಪ್ರಮುಖರ ಸಮಾಗಮದೊಂದಿಗೆ ಆಯೋಜಿಸಿರುವ 'ಮನ್ ಕೀ ಬಾತ್' ರಾಜ್ಯ ಮಟ್ಟದ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಇಂಥ ಮಾದರಿ ಕಾರ್ಯಕ್ರಮಗಳು ನಿರಂತರ ನಡೆಯುವ ಮೂಲಕ ರಾಷ್ಟ್ರೀಯ ವಿಚಾರಗಳು ಎಲ್ಲೆಡೆ ಪಸರಿಸುವಂತಾಗಬೇಕು ಎಂದು ಕುತ್ಯಾರು ಆಶಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಪಕ್ಷದ ಸಭೆಗಳು, ಪದಾಧಿಕಾರಿಗಳ ಜವಾಬ್ದಾರಿ ಮತ್ತು ಸಂಘಟನಾತ್ಮಕ ವಿಚಾರಗಳ ಕುರಿತು ಮಾಹಿತಿ ನೀಡಿ, ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಬಿಜೆಪಿ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಚಾರ ಎಂದರು.
ಅಲ್ಪಸಂಖ್ಯಾತ ಮೋರ್ಚಾ ಮಾಜಿ ರಾಜ್ಯ ಕಾರ್ಯದರ್ಶಿ ಸಲೀಂ ಅಂಬಾಗಿಲು, ಬಿಜೆಪಿ ಆಡಳಿತದ ಅವಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಬಹಳಷ್ಟು ಸೌಲಭ್ಯ ಹಾಗೂ ಸ್ಥಾನಮಾನಗಳು ದೊರೆತಿವೆ. ಅಲ್ಪಸಂಖ್ಯಾತ ಸಮುದಾಯ ಬಿಜೆಪಿಯ ಅಭಿವೃದ್ಧಿ ಪರ ಚಿಂತನೆಗೆ ಕೈಜೋಡಿಸಬೇಕು ಎಂದರು.
ಮೋರ್ಚಾದ ಪದಾಧಿಕಾರಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶೇಖ್ ಆಸಿಫ್ ಕಟಪಾಡಿ, ಮಹಮ್ಮದ್ ಅಫ್ಸರ್ ಉಚ್ಚಿಲ ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಗೀತೆ ಹಾಡಿದರು. ಮೋರ್ಚಾದ ಉಪಾಧ್ಯಕ್ಷ ಚಿರಂಜೀವಿ ಜೈನ್ ಸ್ವಾಗತಿಸಿದರು. ಕೋಶಾಧಿಕಾರಿ ಗ್ಲೆನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಮೈಕಲ್ ಡಿ:ಸೋಜ ವಂದಿಸಿದರು.