ಲೋಕಬಂಧು ನ್ಯೂಸ್ ಶಿರ್ವ, ಜು.2
ಕಾರಿಗೆ ಟ್ಯಾಂಕ್ ಪೂರ್ತಿ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿಯಾದವರನ್ನು ಬಂಧಿಸುವಲ್ಲಿ ಶಿರ್ವ ಪೊಲೀಸರು ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತರನ್ನು ಮಂಗಳೂರಿನ ಕೋಟೆಕಾರು ನಿವಾಸಿ ಮಹಮ್ಮದ್ ರಿಯಾಜ್ (26), ಶಿರ್ವ ನಿವಾಸಿ ಮಹಮ್ಮದ್ ಅಫ್ರಾಜ್ (23) ಮತ್ತು ಉಡುಪಿ ಅಂಬಾಗಿಲು ನಿವಾಸಿ ಆಶಿಲ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರು (ಕೆರ14-ಎಂಬಿ-8452) ವಶಪಡಿಸಿಕೊಳ್ಳಲಾಗಿದೆ
ಜೂ. 27ರಂದು ರಾತ್ರಿ 9.10ರ ಸುಮಾರಿಗೆ ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಸುಭಾಸ್ ನಗರದಲ್ಲಿರುವ ಪೆಟ್ರೋಲ್ ಬಂಕ್‌ಗೆ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದು ಕಾರಿನಲ್ಲಿದ್ದ ವ್ಯಕ್ತಿಯೋರ್ವ ಬಂಕ್ ಸಿಬ್ಬಂದಿ ಶಶಾಂಕ್ ಅವರಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸುವಂತೆ ಸೂಚಿಸಿದ್ದು,4,711.09 ರೂ. ಮೌಲ್ಯದ ಡೀಸೆಲ್ ತುಂಬಿಸಲಾಗಿತ್ತು.
ಬಳಿಕ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸುವುದಾಗಿ ಹೇಳಿ, ಬಿಲ್ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು. ಸಿಬ್ಬಂದಿ ಬಿಲ್ ತೆಗೆಯುವಷ್ಟರಲ್ಲಿ ಹಣ ಪಾವತಿಸದೆ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದರು.
ಪ್ರಕರಣವಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಕಾರ್ಕಳ ಪೊಲೀಸ್ ಉಪಾಧೀಕ್ಷಕ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತ ಪೊಲೀಸ್ ನಿರೀಕ್ಷಕ ಅಝಮತ್ ಅಲಿ ಮಾರ್ಗದರ್ಶನದಲ್ಲಿ ಶಿರ್ವ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಮೊರಬದ, ಲೋಹಿತ್ ಕುಮಾರ್ ಸಿ.ಎಸ್. ಹಾಗೂ ಸಿಬ್ಬಂದಿಗಳಾದ ಹರ್ಷ ಭಟ್, ಬಸವರಾಜ ಮತ್ತು ದರಿಯಪ್ಪ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಇದೇ ರೀತಿಯ ವಂಚನೆ ಕೃತ್ಯಗಳನ್ನು ಬೇರೆಡೆಗಳಲ್ಲಿ ಎಸಗಿರುವ ಕುರಿತು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.