ಲೆಕ್ಕಪರಿಶೋಧಕರದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮೌನ ಸಾಧನೆ. ಅವರು ಆರ್ಥಿಕ ವ್ಯವಸ್ಥೆಯ ವಿಶ್ವಾಸಾರ್ಹತೆಯ ರಕ್ಷಕರರು.ವ್ಯಕ್ತಿಯೊಬ್ಬನ ಆರ್ಥಿಕ ವ್ಯವಹಾರಗಳಿಂದ ಹಿಡಿದು ದೇಶದ ಅಭಿವೃದ್ಧಿಯ ವರೆಗೆ ಹಣಕಾಸಿನ ಶಿಸ್ತು ಮತ್ತು ಪಾರದರ್ಶಕತೆ ಅತ್ಯಂತ ಮಹತ್ವದ್ದು. ಈ ಮೌಲ್ಯಗಳನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಲೆಕ್ಕಪರಿಶೋಧಕರನ್ನು ಗೌರವಿಸುವ ಸಲುವಾಗಿ ಪ್ರತಿವರ್ಷ ಜುಲೈ 1ರಂದು ಲೆಕ್ಕಪರಿಶೋಧಕರ ದಿನ ಎಂಬುದಾಗಿ ಆಚರಿಸಲಾಗುತ್ತದೆ. 1949ರ ಜುಲೈ 1ರಂದು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ (ಐಸಿಎಐ) ಸ್ಥಾಪನೆಯಾದ ಹಿನ್ನೆಲೆಯಲ್ಲಿ ಈ ದಿನಕ್ಕೆ ವಿಶೇಷ ಮಹತ್ವ ಉಂಟು.ಲೆಕ್ಕಪರಿಶೋಧಕರು ಕೇವಲ ಲೆಕ್ಕಪತ್ರ ಪರಿಶೀಲಿಸುವ ತಜ್ಞರಲ್ಲ; ಅವರು ಆರ್ಥಿಕ ವ್ಯವಸ್ಥೆಯ ವಿಶ್ವಾಸಾರ್ಹತೆಯ ರಕ್ಷಕರರು. ಸರ್ಕಾರಿ ಸಂಸ್ಥೆಗಳು, ಖಾಸಗಿ ಕಂಪನಿಗಳು, ಕೈಗಾರಿಕೆಗಳು, ಬ್ಯಾಂಕುಗಳು, ಸೇವಾಸಂಸ್ಥೆಗಳು ಇತ್ಯಾದಿಗಳ ಹಣಕಾಸಿನ ವ್ಯವಹಾರಗಳನ್ನು ನಿಖರವಾಗಿ ಪರಿಶೀಲಿಸಿ, ಕಾನೂನುಬದ್ಧವಾಗಿ ನಿರ್ವಹಣೆಯಾಗುತ್ತಿರುವುದನ್ನು ಖಚಿತಪಡಿಸುತ್ತಾರೆ. ತೆರಿಗೆ ಯೋಜನೆ, ಹಣಕಾಸು ಸಲಹೆ, ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮೂಲಕ ಸಂಸ್ಥೆಗಳ ಸುಸ್ಥಿರ ಬೆಳವಣಿಗೆಗೆ ಅವರು ಬಲ ತುಂಬುತ್ತಾರೆ.
ಜಾಗತೀಕರಣ ಮತ್ತು ಡಿಜಿಟಲ್ ಆರ್ಥಿಕತೆಯ ಯುಗದಲ್ಲಿ ಲೆಕ್ಕಪರಿಶೋಧಕರ ಹೊಣೆಗಾರಿಕೆ ಮತ್ತಷ್ಟು ಹೆಚ್ಚಿದೆ. ಜಿಎಸ್‌ಟಿ, ಆದಾಯ ತೆರಿಗೆ, ಕಂಪನಿ ಕಾನೂನು, ಡಿಜಿಟಲ್ ಹಣಕಾಸು ವ್ಯವಸ್ಥೆ, ಸೈಬರ್ ಸುರಕ್ಷತೆಯಂಥ ಕ್ಷೇತ್ರಗಳಲ್ಲಿ ಅವರ ಪರಿಣತಿ ಅತ್ಯಗತ್ಯ. ಪಾರದರ್ಶಕ ಹಣಕಾಸು ವ್ಯವಸ್ಥೆ ರೂಪಿಸುವ ಮೂಲಕ ಹೂಡಿಕೆದಾರರು, ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಲೆಕ್ಕಪರಿಶೋಧಕರ ಕೊಡುಗೆ ಅಮೂಲ್ಯವಾಗಿದೆ. ನೈತಿಕತೆ, ಪ್ರಾಮಾಣಿಕತೆ ಮತ್ತು ವೃತ್ತಿಪರತೆಯನ್ನು ಅಳವಡಿಸಿಕೊಂಡು ದೇಶದ ಆರ್ಥಿಕ ಅಭಿವೃದ್ಧಿಗೆ ಮೌನವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಲೆಕ್ಕಪರಿಶೋಧಕರ ದಿನ ಒಂದು ವೃತ್ತಿಯ ಆಚರಣೆಗೆ ಸೀಮಿತವಾಗದೇ ದೇಶದ ಆರ್ಥಿಕ ಶಿಸ್ತು ಮತ್ತು ಪಾರದರ್ಶಕ ಆಡಳಿತಕ್ಕೆ ಶ್ರಮಿಸುವ ಎಲ್ಲ ವೃತ್ತಿಪರರಿಗೆ ಸಲ್ಲಿಸುವ ಗೌರವ. ಅವರ ಸೇವೆಯನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಈ ವೃತ್ತಿಯ ಮಹತ್ವವನ್ನು ಪರಿಚಯಿಸುವುದು ಈ ದಿನಾಚರಣೆಯ ಮುಖ್ಯ ಆಶಯವೂ ಹೌದು.