ಐವನ್ ಡಿ'ಸೋಜಾಗೆ ಸಚಿವ ಸ್ಥಾನ ನೀಡಿ

ಲೋಕಬಂಧು ನ್ಯೂಸ್ ಉಡುಪಿ, ಜು.2
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕೆಥೊಲಿಕ್ ಸಭಾ ಉಡುಪಿ ಹಾಗೂ ಮಂಗಳೂರು ಪ್ರದೇಶ ಸದಸ್ಯರು ಬೆಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಅಭಿನಂದಿಸಿದರು.ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕೆಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶ ವತಿಯಿಂದ ಮನವಿ ನೀಡಲಾಯಿತು.


ಕರಾವಳಿಯಲ್ಲಿ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಐವನ್ ಡಿ'ಸೋಜಾ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್ ಮುಖ್ಯ ಸಚೇತಕಾರಾಗಿ ಕ್ರೈಸ್ತ ಅಭಿವೃದ್ದಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.


ಕಾಂಗ್ರೆಸ್ ಪಕ್ಷದ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದ್ದು ರಾಜ್ಯದ 22 ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಸಮುದಾಯಕ್ಕೆ ಪ್ರತೀ ಬಾರಿ ಉನ್ನತ ಸ್ಥಾನ ನೀಡುವಾಗ ಅವಕಾಶ ವಂಚಿರಾಗುತ್ತಿದ್ದು ಈ ಬಾರಿ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶ ನೀಡಬೇಕು. ಆ ಮೂಲಕ ಐವನ್ ಡಿ'ಸೋಜಾ ಅವರಿಗೆ ಸಚಿವ ಸ್ಥಾನ ಅಥವಾ ವಿಧಾನ ಪರಿಷತ್ ಸಭಾಪತಿಯನ್ನಾಗಿ ನೇಮಿಸಬೇಕು. ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಏಳಿಗೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.ನಿಯೋಗದಲ್ಲಿ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸಂತೋಷ್ ಡಿ'ಸೋಜಾ, ಉಪಾಧ್ಯಕ್ಷರಾದ ಸ್ಟೀವನ್ ರೊಡ್ರಿಗಸ್ ಮತ್ತು ಸುನಿಲ್ ಮೋನಿಸ್, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹ ಶಿರ್ವ,  ಕುಂದಾಪುರ ವಲಯಾಧ್ಯಕ್ಷೆ ಶೈಲಾ ಅಲ್ಮೆಡಾ, ಕಾರ್ಕಳ ಅಧ್ಯಕ್ಷ ಆ್ಯಂಟನಿ ಮಿರಾಂದ, ಉಡುಪಿ ಅಧ್ಯಕ್ಷ ಕಿರಣ್ ಲೂವಿಸ್, ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಮೊದಲಾದವರಿದ್ದರು.