ಲೋಕಬಂಧು ನ್ಯೂಸ್ | ಉಡುಪಿ, ಜು.1
ಉಡುಪಿ ನಗರಸಭೆಯ ಜನನ ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ಅಧಿಕಾರಿಗಳ ವಿಳಂಬ ಧೋರಣೆ, ಅಸಹಕಾರದ ಬಗ್ಗೆ ಸಾರ್ವಜನಿಕರಿಂದ ದೂರು ಹಾಗೂ ಪತ್ರಿಕಾ ವರದಿ ಮೇರೆಗೆ ಶಾಸಕ ಯಶಪಾಲ್ ಸುವರ್ಣ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನನ ಮರಣ ಪ್ರಮಾಣ ಪತ್ರ ವಿಭಾಗದಲ್ಲಿ ನೂರಾರು ಕಡತಗಳು ಬಾಕಿ ಇದ್ದು, ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸುತ್ತಾ ಈ ಬಗ್ಗೆ ಪೂರಕ ಮಾಹಿತಿ ನೀಡಲು ಸಹಕಾರ ನೀಡದಿರುವ ಬಗ್ಗೆ ಅಧಿಕಾರಿಗಳಿಗೆ ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದರು.
ಹೆಚ್ಚಿನ ಸಂಖ್ಯೆಯಲ್ಲಿ ತಿದ್ದುಪಡಿ ಅರ್ಜಿ ಬರುತ್ತಿದ್ದು, ಜನನ ಪ್ರಮಾಣ ಪತ್ರ ಅರ್ಜಿ ಸ್ವೀಕರಿಸುವಾಗಲೇ ಅರ್ಜಿದಾರರಿಗೆ ಮಾಹಿತಿ ಕೊರತೆ ಇದ್ದಲ್ಲಿ ಆ ಬಗ್ಗೆ ಸೂಕ್ತ ಮಾಹಿತಿ ನೀಡಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಯ ಜನನ ಮರಣ ಪ್ರಮಾಣ ಪತ್ರ ವಿಭಾಗಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಹಾಗೂ ಕಂಪ್ಯೂಟರ್ ವ್ಯವಸ್ಥೆ ಮಾಡುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ ಇದ್ದರು.
