ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ; ಅದು ಸೇವೆ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕ.'ವೈದ್ಯೋ ನಾರಾಯಣೋ ಹರಿಃ' ಎಂಬ ಉಕ್ತಿ ವೈದ್ಯರ ಸ್ಥಾನ-ಮಾನವನ್ನು ಎತ್ತಿತೋರಿಸುತ್ತದೆ. ರೋಗಿಯ ನೋವು ನಿವಾರಿಸಿ ಬದುಕಿಗೆ ಹೊಸ ಆಶಾಕಿರಣ ನೀಡುವ ವೈದ್ಯರಿಗೆ ಗೌರವ ಸಲ್ಲಿಸುವ ದಿನವೇ ಜುಲೈ 1ರಂದು ಆಚರಿಸುವ ರಾಷ್ಟ್ರೀಯ ವೈದ್ಯರ ದಿನಾಚರಣೆ.ಭಾರತದಲ್ಲಿ ಈ ದಿನವನ್ನು ಖ್ಯಾತ ವೈದ್ಯ, ಶಿಕ್ಷಣ ತಜ್ಞ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರ ಜನ್ಮದಿನ ಮತ್ತು ಪುಣ್ಯತಿಥಿಯ ಸ್ಮರಣಾರ್ಥ ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಮೋಘ ಸೇವೆಗೆ ಗೌರವ ಸೂಚಿಸುವ ಸಂಕೇತವಾಗಿ ಈ ದಿನ ಮಹತ್ವ ಪಡೆದಿದೆ.
ವೈದ್ಯರ ವೃತ್ತಿ ಕೇವಲ ಉದ್ಯೋಗವಲ್ಲ; ಅದು ಸೇವೆ, ತ್ಯಾಗ ಮತ್ತು ಮಾನವೀಯತೆಯ ಪ್ರತೀಕ. ಪ್ರತಿದಿನ ನೂರಾರು ರೋಗಿಗಳ ನೋವು, ಸಂಕಷ್ಟ ಮತ್ತು ಆತಂಕವನ್ನು ಎದುರಿಸುತ್ತಾ ಅವರ ಆರೋಗ್ಯಕ್ಕಾಗಿ ಶ್ರಮಿಸುವ ವೈದ್ಯರು ಸಮಾಜದ ನಿಜವಾದ ಜೀವದಾತರು.
ತುರ್ತು ಪರಿಸ್ಥಿತಿಗಳಲ್ಲಿ, ಸಾಂಕ್ರಾಮಿಕ ರೋಗಗಳ ಸಂದರ್ಭಗಳಲ್ಲಿ ಹಾಗೂ ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ತಮ್ಮ ಕುಟುಂಬಕ್ಕಿಂತ ಕರ್ತವ್ಯವನ್ನೇ ಮೊದಲಾಗಿಸಿ ಸೇವೆ ಸಲ್ಲಿಸುವ ಅವರ ಸಮರ್ಪಣಾ ಮನೋಭಾವ ಅನುಕರಣೀಯ.
ಆಧುನಿಕ ವೈದ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದರೂರೋಗಿಯ ಮೇಲಿನ ವೈದ್ಯರ ಕಾಳಜಿ, ಅನುಭವ ಮತ್ತು ಮಾನವೀಯ ಸ್ಪರ್ಷಕ್ಕೆ ಪರ್ಯಾಯವಿಲ್ಲ. ವೈದ್ಯ ಮತ್ತು ರೋಗಿಯ ನಡುವಿನ ಪರಸ್ಪರ ವಿಶ್ವಾಸವೇ ಉತ್ತಮ ಚಿಕಿತ್ಸೆಯ ಮೂಲಾಧಾರ.
ವೈದ್ಯರ ದಿನಾಚರಣೆ ವೈದ್ಯರ ಸೇವೆ ಸ್ಮರಿಸುವ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತರಾಗುವ ಸಂದೇಶವನ್ನೂ ನೀಡುತ್ತದೆ. ಆರೋಗ್ಯಕರ ಜೀವನ ಶೈಲಿಯ ಅಳವಡಿಸಿಕೆ, ವೈದ್ಯರ ಸಲಹೆಗಳ ಪಾಲನೆ ಹಾಗೂ ವೈದ್ಯಕೀಯ ವೃತ್ತಿಯ ಬಗ್ಗೆ ಗೌರವ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕ ಜವಾಬ್ದಾರಿ.
ಸಮಾಜದ ಆರೋಗ್ಯ ಕಾಪಾಡುವ ಈ ಮಹಾನ್ ಸೇವಕರಿಗೆ ವೈದ್ಯರ ದಿನಾಚರಣೆಯಂದು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಾ, ಅವರ ಸೇವಾ ಮನೋಭಾವಕ್ಕೆ ಗೌರವದ ನಮನ.