ವೈದ್ಯಕೀಯ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಲೋಕಬಂಧು ನ್ಯೂಸ್ ಉಡುಪಿ, ಜು.1
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಬುಧವಾರ ವೈದ್ಯಕೀಯ ಸಹಿತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.ರಾಷ್ಟ್ರೀಯ ವೈದ್ಯರ ದಿನ ಅಂಗವಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಅಶೋಕ್, ರಾಷ್ಟ್ರೀಯ ಲೆಕ್ಕಪರಿಶೋಧಕರ ದಿನ ಅಂಗವಾಗಿ ಹಿರಿಯ ಲೆಕ್ಕಪರಿಶೋಧಕ ಯು.ಬಿ.ಅಜಿತ್ ಕುಮಾರ್, ಪತ್ರಿಕಾ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಹಾಗೂ ರಾಷ್ಟ್ರೀಯ ಅಂಚೆ ಕಾರ್ಮಿಕರ ದಿನದ ಅಂಗವಾಗಿ ಅಂಚೆಪೇದೆ ನಾಗರಾಜ್ ಶೆಟ್ಟಿಗಾರ್ ಅವರನ್ನು ಗುರುತಿಸಿ, ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸಿ ಶಾಲು ಹೊದಿಸಿ, ಪುಷ್ಪಮಾಲೆ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಮಾತನಾಡಿ ಕಳೆದ 3 ದಶಕದಿಂದ ಪತ್ರಿಕೋದ್ಯಮದಲ್ಲಿ ಪಕ್ಷಾತೀತವಾಗಿ, ದ್ವೇಷದ ಮನೋಭಾವ ಇಟ್ಟುಕೊಳ್ಳದೇ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಪತ್ರಕರ್ತರು ವರದಿಗಾರಿಕೆಯ ಜವಾಬ್ದಾರಿಯೊಂದಿಗೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು.


ಸಾಮಾಜಿಕ ಮಾಧ್ಯಮದ ಭರಾಟೆಯ ನಡುವೆಯೂ ದಾಖಲೆಯುಕ್ತ ಪ್ರಬುದ್ಧ ವರದಿಗಾರಿಕೆ ಮೂಲಕ ಪತ್ರಿಕೋದ್ಯಮ ತನ್ನ ಮಹತ್ವ ಉಳಿಸಿಕೊಳ್ಳಲು ಸಾಧ್ಯವಿದೆ ಎಂದರು.


ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ  ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಪುತ್ರನ್, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಯುವರಾಜ್ ಪುತ್ತೂರು, ಸಂಧ್ಯಾ ತಿಲಕ್‌ರಾಜ್, ಮಮತಾ ಶೆಟ್ಟಿ, ಭರತ್ ಕುಮಾರ್, ಸಂಜಯ್ ಆಚಾರ್ಯ, ಲಕ್ಷ್ಮೀಶ್ ಶೆಟ್ಟಿ, ಲ್ಯಾನ್ಸಿ ಡಿ'ಸೋಜಾ, ಯಾದವ್ ಆಚಾರ್ಯ ಮತ್ತು ಅರ್ಚನಾ ದೇವಾಡಿಗ ಹಾಗೂ ಉದ್ಯಮಿ ಸಚಿನ್ ಇದ್ದರು.