ಮಾದಕ ವಸ್ತು ಮುಕ್ತ ಜಿಲ್ಲೆಯಾಗಿಸಲು ಕೈಜೋಡಿಸಿ

ಲೋಕಬಂಧು ನ್ಯೂಸ್ | ಮಣಿಪಾಲ, ಜು.1
ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಸಾಗಾಟ, ಬಳಕೆ ಮತ್ತು ಮಾರಾಟದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಕ್ಯೂಆರ್ ಕೋಡ್ ಅಭಿವೃದ್ಧಿಗೊಳಿಸಲಾಗಿದ್ದು, ಸಾರ್ವಜನಿಕರು ಮಾದಕ ವಸ್ತು ಚಟುವಟಿಕೆ ಬಗ್ಗೆ ಮಾಹಿತಿ ಹೊಂದಿದಲ್ಲಿ ಕ್ಯೂಆರ್ ಕೋಡ್ ಮೂಲಕ ಮಾಹಿತಿ ಹಂಚಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು. ಮಾಹಿತಿ ನೀಡಿದವರ ವಿವರ ರಹಸ್ಯವಾಗಿಡಲಾಗುವುದು. ಜಿಲ್ಲೆಯನ್ನು ಮಾದಕ ವಸ್ತು ಮುಕ್ತವನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದವರು ಮನವಿ ಮಾಡಿದರು.
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಕೇಂದ್ರ, ಕಾರ್ಮಿಕ ಇಲಾಖೆ ಕ್ಯೂಆರ್ ಕೋಡ್ ಸಾರ್ವಜನಿಕವಾಗಿ ಎದ್ದುಕಾಣುವಂತೆ ಬಸ್ ನಿಲ್ದಾಣ, ಕೈಗಾರಿಕೆ ಹಾಗೂ ಕಾರ್ಮಿಕ ಅಸೋಸಿಯೇಷನ್, ಸಿನೆಮಾ ಹಾಲ್‌ಗಳಲ್ಲಿ ಪ್ರದರ್ಶಿಸಬೇಕು.


ಮಾದಕ ವಸ್ತು ಸೇವನೆ ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮಾನಸಿಕ ನೆಮ್ಮದಿ ಹಾಳಾಗುವ ಜೊತೆಗೆ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ. ಯುವ ಸಮುದಾಯ ಇಂಥ ಪಿಡುಗುಗಳಿಗೆ ಹೆಚ್ಚು ಆಕರ್ಷಿತವಾಗುತ್ತಿದ್ದು ಶಾಲಾ- ಕಾಲೇಜುಗಳಲ್ಲಿ ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಹೆಚ್ಚು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆ ಸಿಬ್ಬಂದಿ ಕೃಷಿ ಜಮೀನು, ತೋಟ ಹಾಗೂ ಕಾಡಂಚಿಗೆ ಆಗಾಗ ಅನಿರೀಕ್ಷಿತ ಭೇಟಿ ಮಾಡಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.


ಔಷಧಿ ಅಂಗಡಿಗಳಲ್ಲಿ ಅಮಲು ಬರಿಸುವ ಔಷಧಿಯನ್ನು ವೈದ್ಯರ ನಿರ್ದೇಶನದ ಚೀಟಿಯ ಹೊರತಾಗಿ ಮಾರುವಂತಿಲ್ಲ. ಆ ಬಗ್ಗೆ ಕಡ್ಡಾಯವಾಗಿ ಸೂಚನಾ ಫಲಕ ಅಳವಡಿಸಬೇಕು. ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿಗಳು ಆಗಾಗ ಮೆಡಿಕಲ್ ಸ್ಟೋರ್'ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಮಿಕಲ್ ಫ್ಯಾಕ್ಟರಿ ಮತ್ತಿತರ ಕೈಗಾರಿಕಾ ಕೇಂದ್ರಗಳಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ, ಡ್ರಗ್ ತಯಾರಿ ಬಗ್ಗೆ ಪರಿಶೀಲಿಸಬೇಕು ಎಂದರು.


ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ಸ್ ಸಮಿತಿ ರಚಿಸಿ, ಅವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಶಾಲಾ- ಕಾಲೇಜುಗಳಲ್ಲಿ ಪ್ರತೀ ತಿಂಗಳ 25ನೇ ದಿನಾಂಕದಂದು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವ್ಯಸನ ಮುಕ್ತವಾಗಿಸಲು ಮುಂದಾಗಬೇಕು.


ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳ ಮೇಲೆ ನಿಗಾ, ಪಾರ್ಸೆಲ್ ಮೂಲಕ ಮಾದಕ ವಸ್ತುಗಳ ಸರಬರಾಜು, ಹೊರ ರಾಜ್ಯಗಳ ಕಾರ್ಮಿಕರ ಬಗ್ಗೆಯೂ ಎಚ್ಚರ ವಹಿಸಬೇಕು. ಕರಾವಳಿ ಕಾವಲು ಪಡೆಯವರು ಬೋಟ್'ಗಳ ತಪಾಸಣೆ ನಡೆಸುವಂತೆ ಸೂಚಿಸಿದರು.


ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸಹಾಯಕ ಕಮೀಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.