ಎನ್‌ಡಿಎ ಆಯ್ಕೆಯಲ್ಲಿ ಪಠ್ಯಜ್ಞಾನಕ್ಕಿಂತ ನಾಯಕತ್ವ ಗುಣಗಳಿಗೆ ಆದ್ಯತೆ

ಲೋಕಬಂಧು ನ್ಯೂಸ್ ಮೂಡುಬಿದಿರೆ, ಜು.1
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಆಯ್ಕೆ ಪ್ರಕ್ರಿಯೆಯಲ್ಲಿ ಪಠ್ಯಜ್ಞಾನಕ್ಕಿಂತ ಅಭ್ಯರ್ಥಿಗಳ ನಾಯಕತ್ವ ಗುಣ, ವ್ಯಕ್ತಿತ್ವ, ತಾರ್ಕಿಕ ಚಿಂತನೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿ ನಿರ್ದೇಶಕ ಕರ್ನಲ್ ಸೋಮು ಜಿ. ಮಹಾರಾಜನ್ ಹೇಳಿದರು.ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಡಿಎ ಆಕಾಂಕ್ಷಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ) ಆಯ್ಕೆ ಪ್ರಕ್ರಿಯೆ ಕೇವಲ ಶೈಕ್ಷಣಿಕ ಸಾಧನೆಯನ್ನು ಪರೀಕ್ಷಿಸುವುದಿಲ್ಲ. ಅಭ್ಯರ್ಥಿಯ ವ್ಯಕ್ತಿತ್ವ, ಭಾವನಾತ್ಮಕ ಸ್ಥಿರತೆ, ಸಂವಹನ ಕೌಶಲ್ಯ, ಸಮಸ್ಯೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹಾಗೂ ಒತ್ತಡದ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಗುಣಗಳನ್ನು ವಿವಿಧ ಹಂತಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ.
ಮನೋವೈಜ್ಞಾನಿಕ ಪರೀಕ್ಷೆಗಳು, ಗುಂಪು ಚರ್ಚೆ, ನಾಯಕತ್ವ ಚಟುವಟಿಕೆ, ಸಮಸ್ಯೆ ಪರಿಹಾರ ಕಾರ್ಯ ಮತ್ತು ವೈಯಕ್ತಿಕ ಸಂದರ್ಶನಗಳ ಮೂಲಕ ಅಭ್ಯರ್ಥಿಯ ಆಲೋಚನಾ ವಿಧಾನ, ನಾಯಕತ್ವ ಸಾಮರ್ಥ್ಯ, ಸಂವಹನ ಕೌಶಲ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಮನೋಭಾವ ಹಾಗೂ ಒತ್ತಡದ ಸಂದರ್ಭಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಕಂಠಪಾಠ ಮಾಡಿದ ಅಥವಾ ಪೂರ್ವಸಿದ್ಧ ಉತ್ತರಗಳಿಗಿಂತ ಅಭ್ಯರ್ಥಿಯ ಸಹಜ ವ್ಯಕ್ತಿತ್ವ, ನೈಜ ಆಲೋಚನಾ ವಿಧಾನ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ನಾಯಕತ್ವದ ಗುಣಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ.


ವಿದ್ಯಾರ್ಥಿಗಳು ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಯಾವುದೇ ಸಮಸ್ಯೆಯನ್ನು ಅದರ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.


ಎನ್‌ಡಿಎ ಪರೀಕ್ಷೆ ಮತ್ತು ಎಸ್‌ಎಸ್‌ಬಿ ಸಂದರ್ಶನಕ್ಕೆ ಸಿದ್ಧರಾಗುವ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ, ಸಂವಹನ ಕೌಶಲ್ಯ, ದೇಹ ಭಾಷೆ ಹಾಗೂ ದೈಹಿಕ ಸಾಮರ್ಥ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಬೇಕು. ಆಲೋಚನೆ, ಮಾತು ಮತ್ತು ಕಾರ್ಯಗಳಲ್ಲಿ ಹೊಂದಾಣಿಕೆ ಕಾಯ್ದುಕೊಳ್ಳುವುದು ಭವಿಷ್ಯದ ಅಧಿಕಾರಿಗಳಿಗೆ ಅತ್ಯಗತ್ಯ ಎಂದು ಸಲಹೆ ನೀಡಿದರು.


ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ‍್ಯ ಪ್ರೊ. ಸದಾಕತ್ ಮಾತನಾಡಿ,  ದೇಶಸೇವೆಯ ಕನಸು ಕಾಣುವ ಸಾವಿರಾರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪರೀಕ್ಷೆ ಪ್ರತಿಷ್ಠಿತ ಅವಕಾಶವಾಗಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಪ್ರವೇಶದ್ವಾರವಾಗಿದೆ.


ದೇಶದ ಅತ್ಯಂತ ಕಠಿಣ ಮತ್ತು ಗೌರವಾನ್ವಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಎನ್‌ಡಿಎ ಪರೀಕ್ಷೆ ವಿದ್ಯಾರ್ಥಿಯ ಬೌದ್ಧಿಕ ಸಾಮರ್ಥ್ಯದ ಜೊತೆಗೆ ನಾಯಕತ್ವ, ವ್ಯಕ್ತಿತ್ವ ಹಾಗೂ ರಾಷ್ಟ್ರಸೇವೆಯ ಬದ್ಧತೆಯನ್ನೂ ಪರೀಕ್ಷಿಸುತ್ತದೆ ಎಂದರು.


ಬಳಿಕ ನಡೆದ ಪ್ರಶ್ನೋತ್ತರ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಹಾಗೂ ಭಾರತೀಯ ಸಶಸ್ತ್ರ ಪಡೆಗಳಲ್ಲಿನ ವೃತ್ತಿ ಅವಕಾಶಗಳ ಕುರಿತು ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.


ಕಾರ‍್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಸಂಯೋಜಕರಲ್ಲೋರ್ವರಾದ ವಿಖ್ಯಾತ ಭಟ್, ಎನ್‌ಡಿಎ ಸಂಯೋಜಕ ದೇವಿಪ್ರಸಾದ್ ಪದ್ಮಾರ್ ಇದ್ದರು. ಉಪನ್ಯಾಸಕ ಶಿವಪ್ರಸಾದ ಕಾರ‍್ಯಕ್ರಮ ನಿರೂಪಿಸಿದರು.