ಮಾಧ್ಯಮಗಳಿಂದ ಸತ್ಯ ಎತ್ತಿಹಿಡಿಯುವ ಕಾರ್ಯವಾಗಲಿ

ಲೋಕಬಂಧು ನ್ಯೂಸ್ | ಉಡುಪಿ, ಜು.1
ಸಾಮಾಜಿಕ ಮಾಧ್ಯಮಗಳ ಅಬ್ಬರದ ನಡುವೆಯೂ ಮಾಧ್ಯಮಗಳು ಸತ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಸಮಾಜದ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಜೊತೆಗೆ ವ್ಯವಸ್ಥೆಯ ಲೋಪದೋಷಗಳನ್ನು ಸಮಾಜದ ಮುಂದಿಡುವುದು ಪತ್ರಕರ್ತರ ಹೊಣೆಗಾರಿಕೆಯಾಗಿದೆ ಎಂದು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನಿರ್ದೇಶಕಿ ಡಾ.ಶುಭಾ ಎಚ್.ಎಸ್. ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪ್ರತಿಕಾ ಭವನ ಸಮಿತಿ ಹಾಗೂ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಸಹಯೋಗದೊಂದಿಗೆ ನಗರದ ಐಎಂಎ ಭವನದಲ್ಲಿ ಬುಧವಾರ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸುದ್ದಿಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಸಂತ್ರಸ್ತರನ್ನಾಗಿಸಿ, ರಾಜಕಾರಣಿಗಳಾಗಿ ಅಥವಾ ಕ್ರೀಡಾಪಟುಗಳಾಗಿ ಮಾತ್ರ ಬಿಂಬಿಸಲಾಗುತ್ತದೆ. ಆದರೆ ನೀತಿ ನಿರೂಪಕಿ, ವಿಷಯ ತಜ್ಞೆ ಮಹಿಳೆಯರನ್ನು ಸಂದರ್ಶಿಸುವ ಅಥವಾ ಅವರ ಅಭಿಪ್ರಾಯ ಪಡೆಯುವ ಪ್ರಮಾಣ ಅತ್ಯಂತ ವಿರಳ ಎಂದವರು ಬೊಟ್ಟುಮಾಡಿದರು.


ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ, ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಂಜುನಾಥ್ ಆಗಮಿಸಿದ್ದರು.


ಈ ಸಂದರ್ಭದಲ್ಲಿ ಹಿರಿಯ ವ್ಯಂಗ್ಯಚಿತ್ರಕಾರ ಜೇಮ್ಸ್ ವಾಜ಼್ ಅವರಿಗೆ ಪತ್ರಿಕಾ ದಿನದ ಗೌರವ ನೀಡಲಾಯಿತು.


ಸಂಪನ್ಮೂಲ ವ್ಯಕ್ತಿಯಾಗಿದ್ದ ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ತಂತ್ರಜ್ಞಾನ ಸಂಸ್ಥೆ ಆಡಳಿತಾಧಿಕಾರಿ ಎಸ್.ಎಚ್.ಸಂತೋಷ್ ಕುಮಾರ್ ಪತ್ರಕರ್ತರ ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಮಾತನಾಡಿದರು.


ಈ ಬಾರಿಯ ಎಸ್ಎಸ್ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರಾಜ್ಯ ಸರಕಾರದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಯೋಜನೆಯ ಫಲಾನುಭವಿ ಯೋಗೀಶ್ ಕುಂಭಾಶಿ ಅವರಿಗೆ ಕಾರ್ಡ್ ಹಸ್ತಾಂತರಿಸಲಾಯಿತು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಉಡುಪಿ ಪತ್ರಿಕಾ ಭವನ ಸಮಿತಿ ಸಹಸಂಚಾಲಕ ಗಣೇಶ ಕಲ್ಯಾಣಪುರ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಇದ್ದರು.


ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಮಾರ್ಪಳ್ಳಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಜಿಲ್ಲಾ ಸಮಿತಿ ಸದಸ್ಯ ಅಜಿತ್ ಆರಾಡಿ ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ಉಡುಪಿ ಪ್ರತಿಕಾ ಭವನ ಸಮಿತಿ ಸದಸ್ಯ ಮೈಕೆಲ್ ರೋಡ್ರಿಗಸ್ ಸನ್ಮಾನಪತ್ರ ವಾಚಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಉದಯ ಕುಮಾರ್ ಮುಂಡ್ಕೂರು ವಂದಿಸಿದರು. ಪತ್ರಕರ್ತೆ ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು.