ಲೋಕಬಂಧು ನ್ಯೂಸ್ ಉಡುಪಿ, ಜು.2
ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲೊಂದಾದ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್ 2025-26ನೇ ಸಾಲಿನಲ್ಲಿ 1,212 ಕೋ.ರೂ. ವ್ಯವಹಾರ ನಡೆಸಿ 26.72 ಕೋ.ರೂ. ಲಾಭ ದಾಖಲಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.
8 ಶಾಖೆ- 50 ಸಾವಿರ ಗ್ರಾಹಕರು
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೊಳಪಟ್ಟು ಅವಿಭಜಿತ ದ.ಕ. ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದು 50 ಸಾವಿರ ಗ್ರಾಹಕರನ್ನು ಹೊಂದಿದೆ. 2025-26ನೇ ಸಾಲಿನಲ್ಲಿ ಬ್ಯಾಂಕ್ 715 ಕೋ. ಠೇವಣಿ, 497 ಕೋ. ಸಾಲ ಮತ್ತು ಮುಂಗಡ, 46 ಕೋ. ಪಾಲು ಬಂಡವಾಳ ಹೊಂದಿದ್ದು 850 ಕೋ. ದುಡಿಯುವ ಬಂಡವಾಳದೊಂದಿಗೆ ಉತ್ತಮ ಪ್ರಗತಿ ಸಾಧಿಸಿದೆ. ಪ್ರಸ್ತುತ 750 ಕೋ. ಠೇವಣಿ ಹಾಗೂ 551 ಕೋ. ಸಾಲ ಮತ್ತು ಮುಂಗಡ ಹೊಂದಿದೆ.
ಲೆಕ್ಕಪರಿಶೋಧನೆಯಲ್ಲಿ 'ಎ' ಶ್ರೇಣಿ
ಕಳೆದ 16 ವರ್ಷದಿಂದ ನಿರಂತರವಾಗಿ ಸದಸ್ಯರಿಗೆ ಅತೀ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿ ಪಡೆದು ಸತತ 8 ವರ್ಷದಿಂದ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನೀಡುವ 'ಸಾಧನ ಪ್ರಶಸ್ತಿ'ಗೆ ಪಾತ್ರವಾಗಿದೆ.
ರಾಜ್ಯದಾದ್ಯಂತ ವಿಸ್ತರಣೆ
ಪ್ರಸ್ತುತ ಬ್ಯಾಂಕಿನ ವ್ಯವಹಾರ ಕ್ಷೇತ್ರ ದ.ಕ., ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಯನ್ನು ಒಳಗೊಂಡಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ.
ಸ್ವಂತ ಕಟ್ಟಡಕ್ಕೆ ಸ್ಥಳಾಂತರ
ಬನ್ನಂಜೆಯಲ್ಲಿ ಸುಮಾರು 7 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ಸ್ವಂತ ಕಟ್ಟಡಕ್ಕೆ ಉಡುಪಿ ಶಾಖೆ ಶೀಘ್ರದಲ್ಲಿಯೇ ಸ್ಥಳಾಂತರಗೊಳ್ಳಲಿದ್ದು ಗಂಗೊಳ್ಳಿ ಶಾಖೆ ಕೂಡಾ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿರುವ ಬ್ಯಾಂಕಿನ ಆಡಳಿತ ಕಚೇರಿ ಹಾಗೂ 7 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮನಾಗಿ ಆಧುನಿಕ ಬ್ಯಾಂಕಿಂಗ್ ಸೇವೆಯ ಮೂಲಕ ಗ್ರಾಹಕ ಸ್ನೇಹಿಯಾಗಿ ಬೆಳೆಯುತ್ತಿರುವ ಬ್ಯಾಂಕ್, ಸುವರ್ಣ ಮಹೋತ್ಸವ ಹೊಸ್ತಿಲಲ್ಲಿ ಐಎಫ್ಎಸ್.ಸಿ. ಕೋಡ್ ಹೊಂದುವ ಮೂಲಕ ಕರಾವಳಿ ಭಾಗದ ಪ್ರಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಸಾಮಾಜಿಕ ಬದ್ಧತೆ
ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ವತಿಯಿಂದ 2 ಸಾವಿರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಗಿದ್ದು, ಉಚ್ಚಿಲ ದಸರಾ ಮಹೋತ್ಸವ ಸಂದರ್ಭದಲ್ಲಿ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ತೃತೀಯ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಪೊಣ್ಣು ಪಿಲಿ ನಲಿಕೆ ಸಾಂಸ್ಕೃತಿಕ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ.
ಸಾವಿರ ಕೋಟಿ ಠೇವಣಿ ಸಂಗ್ರಹ ಗುರಿ
ಸುವರ್ಣ ಮಹೋತ್ಸವ ಪೂರೈಸುವ ಸಂದರ್ಭದಲ್ಲಿ ಬ್ಯಾಂಕ್ ಒಂದು ಲಕ್ಷ ಗ್ರಾಹಕರನ್ನೊಳಗೊಂಡು ಒಂದು ಸಾವಿರ ಕೋಟಿ ಠೇವಣಿ ಸಂಗ್ರಹಣೆಯ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಯೋಗ ಮೇಳ, ಸಹಕಾರಿ ಸಂಘ ಸಂಸ್ಥೆಗಳ ಸಿಬ್ಬಂದಿಗೆ ಕ್ರೀಡಾಕೂಟ, ಹೊಸ ಶಾಖೆ ಆರಂಭ ಹಾಗೂ ಅಶಕ್ತ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆ ಇತ್ಯಾದಿ ಮಾದರಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಯೋಜಿಸುವ ಯೋಜನೆ ಆಡಳಿತ ಮಂಡಳಿ ಮುಂದಿದೆ ಎಂದು ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.