ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವಗೌರವ

ಲೋಕಬಂಧು ನ್ಯೂಸ್ ಉಡುಪಿ, ಜು.1
ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಸಹಯೋಗದೊಂದಿಗೆ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಗೌರವ ಪುರಸ್ಕಾರವನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಬುಧವಾರ ಪ್ರದಾನ ಮಾಡಲಾಯಿತು.ಹೇಳುವ ಬದಲು ಮಾಡಿ ತೋರಿಸಿ
ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ ಮಕ್ಕಳು ಮತ್ತು ಯುವಜನತೆ ಸಮಾಜಮುಖಿಯಾಗಿ ಪರಿಸರ ಕಾಳಜಿ ಹೊಂದುವುದು ಅಗತ್ಯ ಮತ್ತು ಅನಿವಾರ್ಯ. ಮಕ್ಕಳಿಗೆ ಉಪದೇಶದ ಬದಲು ಯಾವುದೇ ಉತ್ತಮ ಕೆಲಸ ಮಾಡಿ ತೋರಿಸಬೇಕು. ಮನೆಗಳಲ್ಲಿ ಗ್ರಂಥಾಲಯ ರೂಪುಗೊಂಡರೆ ಬೌದ್ಧಿಕ ಶ್ರೀಮಂತಿಕೆ ಹೆಚ್ಚಳ ಸಾಧ್ಯ ಎಂದರು.


ಸಾಹಿತ್ಯದಿಂದ ಪೂರ್ಣ ಜೀವನ
ಅಧ್ಯಕ್ಷತೆ ವಹಿಸಿದ್ದ ಪಾಂಡೇಶ್ವರ ಗುರುಕುಲದ ಡಾ.ವಿಜಯ ಕುಮಾರ್ ಮಂಜರ್ ಸಂಗೀತ, ಕಲೆ, ಸಾಹಿತ್ಯದಿಂದ ಜೀವನ ಪರಿಪೂರ್ಣ. ಅವು ಮೂರೂ ಇಲ್ಲದವ ಬಾಲ, ಕೊಂಬಿಲ್ಲದ ಆದರೆ ಹುಲ್ಲೂ ತಿನ್ನದ ಪಶುವಿಗೆ ಸಮಾನ.


ವ್ಯಕ್ತಿಯ ದೇಹ, ಮನಸ್ಸಿನ ಆರೋಗ್ಯ ಕಾಪಾಡುವ ವೈದ್ಯ, ವ್ಯಕ್ತಿ- ಸಂಸ್ಥೆಯ ಆರ್ಥಿಕತೆ ಕಾಪಾಡುವ ಲೆಕ್ಕಪರಿಶೋಧಕ, ಸಮಾಜದ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ ಎಂದರು.


ಸಂಸ್ಕೃತಿ ವಿಶ್ವ ಪ್ರತಿಷ್ಠ್ಠಾನದ ಸ್ಥಾಪಕ ಯು.ವಿಶ್ವನಾಥ್ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು.


ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವ್ಯವಸ್ಥಾಪಕ ವಿಜಯಕುಮಾರ್ ಡಿ. ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಲಬಾರ್ ವಿಶ್ವ ವೈದ್ಯ ಪುರಸ್ಕಾರವನ್ನು ಡಾ.ಎ. ರಾಮಚಂದ್ರ ಬಾಯರಿ, ಡಾ.ಕೆ.ಸತೀಶ್ ಕಾಮತ್ ಮತ್ತು ಡಾ. ಇಂದಿರಾ ವಿ.ಶಾನುಭೋಗ್, ಮಲಬಾರ್ ವಿಶ್ವ ಲೆಕ್ಕ ಪರಿಶೋಧಕ ಪುರಸ್ಕಾರವನ್ನು ದೇವ್ ಆನಂದ್ ಮತ್ತು ಗಣೇಶ್ ಎರ್ಮಾಳು ಹಾಗೂ ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರವನ್ನು  ಶಶಿಧರ್ ಮಾಸ್ತಿಬೈಲು, ಬಾಲಕೃಷ್ಣ ಪೂಜಾರಿ ಉಚ್ಚಿಲ ಮತ್ತು ರಾಮ್ ಅಜೆಕಾರ್ ಅವರಿಗೆ ಪ್ರದಾನಿಸಲಾಯಿತು.


ಜನಾರ್ದನ ಕೊಡವೂರು ಸ್ವಾಗತಿಸಿದರು. ವಿಘ್ನೇಶ್ವರ ಅಡಿಗ ಪ್ರಸ್ತಾವನೆಗೈದರು. ರಾಜೇಶ್ ಪಣಿಯಾಡಿ ವಂದಿಸಿದರು. ಡಾ.ಭಾರ್ಗವಿ ಐತಾಳ್, ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ಮತ್ತು ರಂಜನಿ ವಸಂತ್ ಸನ್ಮಾನ ಪತ್ರ ವಾಚಿಸಿದರು. ವಿದ್ಯಾ ಶ್ಯಾಮಸುಂದರ್ ಪ್ರಾರ್ಥಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.