'ಗೃಹಜ್ಯೋತಿ' ಕಡಿತ ಇಲ್ಲ

ಲೋಕಬಂಧು ನ್ಯೂಸ್ ಚಿಕ್ಕಮಗಳೂರು, ಜು.2
ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಕುರಿತಾಗಿ ಹರಿದಾಡುತ್ತಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿದರು.


ಯೋಜನೆಯ ಸೌಲಭ್ಯ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡುವ ಉದ್ದೇಶದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮನೆ ಮನೆಗೆ ಅರ್ಜಿ ನಮೂನೆಗಳನ್ನು ವಿತರಿಸಲಾಗುವುದು. ಅರ್ಜಿ ವಿತರಣೆ ವೇಳೆ ಯೋಜನೆಯ ಮಾನದಂಡ ಹಾಗೂ ಅರ್ಹತೆ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.


ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿ ಸುಮಾರು 1.64 ಕೋಟಿ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಅರ್ಹರಲ್ಲದವರು ಸೌಲಭ್ಯ ಪಡೆಯುವುದನ್ನು ತಡೆಯುವುದು ಹಾಗೂ ನೈಜ ಅರ್ಹರನ್ನು ಗುರುತಿಸುವ ಉದ್ದೇಶದಿಂದ ಮಾತ್ರ ಮಾಹಿತಿ ಸಂಗ್ರಹ ನಡೆಯುತ್ತಿದೆ ಎಂದವರು ಸ್ಪಷ್ಟಪಡಿಸಿದರು.


ಇದೇ ವೇಳೆ ಅರ್ಜಿ ನಮೂನೆಯಲ್ಲಿ ಜಾತಿ ವಿವರಗಳನ್ನು ಕೇಳುತ್ತಿರುವ ಕುರಿತು ವ್ಯಕ್ತವಾಗಿರುವ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ. ಜಾರ್ಜ್, ಜಾತಿ ಮಾಹಿತಿ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಕೇವಲ ಮಾಹಿತಿ ಸಂಗ್ರಹದ ಉದ್ದೇಶಕ್ಕಷ್ಟೇ ಸೀಮಿತವಾಗಿದ್ದು, ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲ. ಅರ್ಹತೆ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗೂ ಯಾವುದೇ ಭೇದಭಾವವಿಲ್ಲದೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದರು.