ಲೋಕಬಂಧು ನ್ಯೂಸ್ ಲಖನೌ, ಜು.1
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ, 89ರ ಹರೆಯದ ಮಹಾಂತ ನೃತ್ಯ ಗೋಪಾಲ್ ದಾಸ್ ಅವರು ಮೂತ್ರನಾಳದ ಸೋಂಕು ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರು ಚಿಕಿತ್ಸೆ ಪಡೆಯುತ್ತಿರುವ ಮೆದಾಂತಾ ಆಸ್ಪತ್ರೆ ಬುಧವಾರ ಬಿಡುಗಡೆ ಮಾಡಿದ ವೈದ್ಯಕೀಯ ಬುಲೆಟಿನ್ ಪ್ರಕಾರ, ಜೂ. 29ರಂದು ಮಧ್ಯಾಹ್ನ ಸುಮಾರು 1.30ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆ ಬಳಿಕ ಅವರಿಗೆ ಮೂತ್ರನಾಳದ ಸೋಂಕು ಇರುವುದು ದೃಢಪಟ್ಟಿದೆ.
ಪ್ರಸ್ತುತ ಅವರು ಐಸಿಯುನಲ್ಲಿದ್ದು, ತೀವ್ರ ನಿಗಾ ತಜ್ಞ ಡಾ.ದಿಲೀಪ್ ಹಾಗೂ ಅವರ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿವಿಧ ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದ್ದು, ಅಗತ್ಯ ಚಿಕಿತ್ಸೆ ನೀಡುತ್ತಿದೆ ಎಂದು ತಿಳಿಸಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಾಮ ಮಂದಿರ ನಿರ್ಮಾಣ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಸಂಸ್ಥೆಯಾಗಿದ್ದು, ನೃತ್ಯ ಗೋಪಾಲ್ ದಾಸ್ ಅದರ ಅಧ್ಯಕ್ಷರಾಗಿದ್ದಾರೆ.
ಜುಲೈ 6ರಂದು ಟ್ರಸ್ಟ್‌ನ ಮಹತ್ವದ ಸಭೆ ನಡೆಯಲಿದ್ದು, ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಲೂಟಿ ಪ್ರಕರಣದ ಬಳಿಕ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಈ ಸಭೆಗೆ ವಿಶೇಷ ಮಹತ್ವ ಬಂದಿದೆ.
ವಯೋಸಹಜ ಆರೋಗ್ಯ ಸಮಸ್ಯೆ ಕಾರಣದಿಂದ ಇತ್ತೀಚಿನ ಕೆಲವು ಸಭೆಗಳಲ್ಲಿ ನೃತ್ಯ ಗೋಪಾಲ್ ದಾಸ್ ಅವರು ವರ್ಚುವಲ್ ಮೂಲಕ ಭಾಗವಹಿಸಿದ್ದರು. ಆದರೆ, ಈಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಜುಲೈ 6ರ ಸಭೆಯಲ್ಲಿ ಅವರು ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.