ಲೋಕಬಂಧು ನ್ಯೂಸ್ | ಮಣಿಪಾಲ, ಜು.1
ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಕಾಮಗಾರಿ ಅಭಿವೃದ್ಧಿಗೆ 78 ಕೋ.ರೂ. ಮಂಜೂರಾಗಿ ಮೂರು ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭಿಸದಿರುವ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಂದರು ಮತ್ತು ಮೀನುಗಾರಿಕೆ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಶೀಘ್ರ ಆರಂಭಿಸುವಂತೆ ತಾಕೀತು ಮಾಡಿದರು.
ರಜತಾದ್ರಿಯ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.
ಬೆಂಗಳೂರಿನ ಪರಿಸರ ಇಲಾಖೆಯಲ್ಲಿ ಕಡತ ಬಾಕಿ ಇದ್ದು ಇಲಾಖಾನುಮತಿ ಲಭಿಸಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು. ಬೆಂಗಳೂರಿನ ಹಿರಿಯ ಅಧಿಕಾರಿಗಳನ್ನು ದೂರವಾಣಿಯೊಂದಿಗೆ ಸಂಪರ್ಕಿದ ಸಂಸದ ಕೋಟ, ವಿಶೇಷ ಪ್ರಕರಣ ಎಂಬುದಾಗಿ ಪರಿಗಣಿಸಿ ಅನುಮತಿ ನೀಡಲು ಸೂಚಿಸಿದರು.
ಕೋಡಿಕನ್ಯಾನ ಕಿರು ಬಂದರಿನ ಹೂಳೆತ್ತುವ ಕಾಮಗಾರಿಗೆ 84 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಬಂದರು ಇಲಾಖೆ ಉಪ ನಿರ್ದೇಶಕ ರಾಥೋಡ್, ಸಿ.ಆರ್.ಝಡ್ ವಿಷಯ ನಿರ್ವಾಹಕ ಧೀರಜ್ ಮೊದಲಾದವರಿದ್ದರು.
