ವಾಟ್ಸಾಪ್‌ನ ಹೊಸ ವೈಶಿಷ್ಟ್ಯ: ಮೆಟಾ ಸಂಸ್ಥೆಗೆ ನೋಟಿಸ್

ಲೋಕಬಂಧು ನ್ಯೂಸ್ ನವದೆಹಲಿ, ಜು.2
ಭಾರತದಲ್ಲಿ ವಾಟ್ಸಾಪ್‌ನ ಹೊಸ ಯೂಸರ್ ನೇಮ್ (ಬಳಕೆದಾರರ ಹೆಸರು) ವೈಶಿಷ್ಟ್ಯ ಪರಿಚಯಿಸುವ ಸಂಬಂಧ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ನೋಟಿಸ್ ಜಾರಿ‌ ಮಾಡಿದೆ.ಮೂಲಗಳ ಪ್ರಕಾರ, ಈ ವೈಶಿಷ್ಟ್ಯದ ಕುರಿತು ಮೂರು ದಿನಗಳೊಳಗೆ ಸಮಗ್ರ ವಿವರಣೆ ಸಲ್ಲಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾಗೆ ನಿರ್ದೇಶನ ನೀಡಿದೆ.


ವಾಟ್ಸಾಪ್ ತನ್ನ ಬಳಕೆದಾರರ ಹೆಸರು ವೈಶಿಷ್ಟ್ಯವನ್ನು ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡುತ್ತಿರುವುದಾಗಿ ಸಾರ್ವಜನಿಕವಾಗಿ ತಿಳಿಸಿತ್ತು. ಈ ವೈಶಿಷ್ಟ್ಯ ಸಕ್ರಿಯಗೊಂಡ ನಂತರ ಹೊಸದಾಗಿ ಸಂಪರ್ಕಿಸುವವರಿಗೆ ಬಳಕೆದಾರರ ಮೊಬೈಲ್ ಸಂಖ್ಯೆ ಗೋಚರಿಸುವ  ಬದಲಾಗಿ ಬಳಕೆದಾರರು ಐಚ್ಛಿಕವಾಗಿ ತಮ್ಮದೇ ಆದ ಯೂಸರ್ ನೇಮ್ ಹೊಂದಿಸಿಕೊಳ್ಳಬಹುದಾಗಿದೆ.


ಆದರೆ, ಈ ಹೊಸ ವ್ಯವಸ್ಥೆಯಿಂದ ಆನ್‌ಲೈನ್ ವಂಚನೆ, ಫಿಶಿಂಗ್, ಡಿಜಿಟಲ್ ಬಂಧನ ಹಗರಣಗಳು ಹಾಗೂ ನಕಲಿ ಗುರುತಿನ ಮೂಲಕ ನಡೆಯುವ ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ.


ವಿಶೇಷವಾಗಿ ಅಪರಿಚಿತರು ನಕಲಿ ಯೂಸರ್ ನೇಮ್ ಬಳಸಿ ಸಾರ್ವಜನಿಕರನ್ನು ಸುಲಭವಾಗಿ ವಂಚಿಸುವ ಅಪಾಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.


ಆ ಹಿನ್ನೆಲೆಯಲ್ಲಿ, ವೈಶಿಷ್ಟ್ಯದ ಸುರಕ್ಷತಾ ಕ್ರಮಗಳು, ಬಳಕೆದಾರರ ಗೌಪ್ಯತೆ ಮತ್ತು ದುರ್ಬಳಕೆ ತಡೆ ವ್ಯವಸ್ಥೆಗಳ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಮೆಟಾಗೆ ಸೂಚಿಸಲಾಗಿದೆ. ಅಲ್ಲದೆ, ಈ ವಿಷಯದ ಕುರಿತು ಸರ್ಕಾರದೊಂದಿಗೆ ಸಮಾಲೋಚನೆ ಪೂರ್ಣಗೊಳ್ಳುವ ವರೆಗೆ ಭಾರತದಲ್ಲಿ ಯೂಸರ್ ನೇಮ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡದಂತೆ ಸಚಿವಾಲಯ ಸೂಚಿಸಿದೆ.