ಬಾರ್ಜರ್ ಮೂಲಕ ಕಸ ಸಂಗ್ರಹಣೆಗೆ ಹೊರಟ ಸ್ವಚ್ಛವಾಹಿನಿ

 


ಲೋಕಬಂಧು ವಾರ್ತೆ
ಸೋಮವಾರ, ಸೆಪ್ಟೆಂಬರ್ 11

ಬಾರ್ಜರ್ ಮೂಲಕ ಕಸ ಸಂಗ್ರಹಣೆಗೆ ಹೊರಟ ಸ್ವಚ್ಛವಾಹಿನಿ
ಬ್ರಹ್ಮಾವರ: ವ್ಯವಸ್ಥಿತ ರೀತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿಯಲ್ಲಿ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ಗಳಲ್ಲಿ ಕಸ ಸಂಗ್ರಹಣೆಗಾಗಿ ಸ್ವಚ್ಛವಾಹಿನಿ ಹೆಸರಿನ ಕಸ ಸಂಗ್ರಹಣೆ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಕೋಡಿ ಗ್ರಾಮ ಪಂಚಾಯತ್ ವತಿಯಿಂದ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜರ್ ಮೂಲಕ ವಾಹನ ತೆರಳಿ ಒಣ ತ್ಯಾಜ್ಯ ಸಂಗ್ರಹಿಸುವ ಮೂಲಕ ಯಾವುದೇ ಸಂದರ್ಭದಲ್ಲಿ ಯಾವುದೇ ಗ್ರಾಮ ಕಸದ ಸಮಸ್ಯೆಗೆ ಒಳಗಾಗದಂತೆ ಸ್ವಚ್ಛ ಗ್ರಾಮವಾಗಿ ರೂಪುಗೊಳ್ಳಲು ವಿಶೇಷ ಪ್ರಯತ್ನ ಕೈಗೊಳ್ಳಲಾಗಿದೆ.

ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆ ಗ್ರಾಮಕ್ಕೆ ಸಂತೆಕಟ್ಟೆ ರಸ್ತೆ ಮೂಲಕ 35 ಕಿ.ಮೀ. ಕ್ರಮಿಸಬೇಕಿದ್ದು, ಒಂದು ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಇಷ್ಟು ದೂರ ಕ್ರಮಿಸುವುದು ಪಂಚಾಯತ್ ನ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿ ಹಾಗೂ ವಾಹನಕ್ಕೆ ನಷ್ಟವಾಗುತ್ತಿದ್ದು, ಗ್ರಾಮ ಪಂಚಾಯತ್ ಹಸಿ ಕಸವನ್ನು ಮೂಲದಲ್ಲಿಯೇ ವಿಲೇವಾರಿ ಮಾಡುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದು, ಒಣ ಕಸ ಸಂಗ್ರಹಣೆಯನ್ನು 15 ದಿನಕ್ಕೊಮ್ಮೆ ಮಾಡಲಾಗುತ್ತಿತ್ತು.

 

ಪ್ರಸ್ತುತ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜರ್ ಸೇವೆ ಆರಂಭಗೊಂಡಿರುವುದರಿಂದ ಈ ಗ್ರಾಮದಲ್ಲಿಯೂ ಒಣ ಕಸ ಸಂಗ್ರಹವನ್ನು ಎಲ್ಲಾ ಗ್ರಾಮಗಳಂತೆಯೇ ಈಗ ನಿರಂತರವಾಗಿ ಸಂಗ್ರಹಿಸುತ್ತಿದ್ದು, ವಾರಕ್ಕೊಮ್ಮೆ ಸುಮಾರು 1 ಟನ್ ಗೂ ಅಧಿಕ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ.

ಅದಕ್ಕಾಗಿ ಪಂಚಾಯತ್ ನ ಸ್ವಚ್ಛ ವಾಹಿನಿ ವಾಹನದೊಂದಿಗೆ ಚಾಲಕ ಹಾಗೂ ಕಸ ಸಂಗ್ರಹ ಸಿಬ್ಬಂದಿ ಬಾರ್ಜರ್ ನಲ್ಲಿಯೇ ತೆರಳಿ ತ್ಯಾಜ್ಯ ಸಂಗ್ರಹ ಮಾಡುವ ಮೂಲಕ ಎಸ್.ಎಲ್.ಆರ್.ಎಂ ಘಟಕದ ಸಿಬ್ಬಂದಿ ಯಾವುದೇ ಸಂದರ್ಭದಲ್ಲೂ ಎಂಥ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕಸ ಸಂಗ್ರಹಣೆಗೆ ನಾವು ಬದ್ಧ ಎಂದು ಸಾರಿದ್ದಾರೆ.

ಕೋಡಿಬೆಂಗ್ರೆ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು ಕೋಡಿ ಗ್ರಾಮ ಪಂಚಾಯತ್ ನಿಂದ ರಸ್ತೆ ಮೂಲಕ 35 ಕಿ.ಮೀ. ದೂರವಿದ್ದು, ದೂರವಾದ ಕಾರಣ ಹಿಂದೆ 15 ದಿನಕ್ಕೊಮ್ಮೆ ಒಣ ಕಸ ಸಂಗ್ರಹ ಮಾಡುತ್ತಿದ್ದು, ಈಗ ಬಾರ್ಜರ್ ಮೂಲಕ ಕಸ ಸಂಗ್ರಹಣೆ ವಾಹನ ತೆಗೆದುಕೊಂಡು ಹೋಗಿ ವಾರಕ್ಕೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ.

 

ರಾಮಕ್ಕೆ ಬಾರ್ಜರ್ ಮೂಲಕ ಕೇವಲ 10 ಕಿ.ಮೀ. ಆಗಲಿದ್ದು, ಅದರಿಂದ ಕಸ ಸಂಗ್ರಹಣಾ ವಾಹನದ ವೆಚ್ಚ ಮತ್ತು ಸಿಬ್ಬಂದಿಗಳ ಸಮಯ ಉಳಿತಾಯವಾಗುತ್ತಿದೆ. ಪ್ರಸ್ತುತ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಶುಲ್ಕದ ಶೇ. 100ರಷ್ಟು ಮೊತ್ತ ಸಂಗ್ರಹವಾಗುತ್ತಿದ್ದು, ಎಸ್.ಎಲ್.ಆರ್.ಎಂ. ಘಟಕ ಈ ಮೊತ್ತದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದು, ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ವಾಹನದ ಇಂಧನ ಸೇರಿದಂತೆ ಯಾವುದೇ ಹಣಕಾಸಿನ ನೆರವನ್ನು ಪಂಚಾಯತ್ ನಿಂದ ಕೋರುತ್ತಿಲ್ಲ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ಹೇಳುತ್ತಾರೆ