ಕಟೀಲಿನಲ್ಲಿ ಝಗಮಗಿಸಿದ ದೀಪೋತ್ಸವ: ದುರ್ಗಾ ರಾಮೋತ್ಸವದ ಸಂಭ್ರಮ

ಲೋಕಬಂಧು ನ್ಯೂಸ್, ಕಟೀಲು
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ  ರಥಬೀದಿಯ ಸುತ್ತಲೂ ಶುಕ್ರವಾರ  ಸಹಸ್ರಾರು ದೀಪಗಳನ್ನು ಬೆಳಗಿದ ಭಕ್ತಜನ ಸಮೂಹ, ದುರ್ಗಾ ರಾಮೋತ್ಸವದ ಮೆರುಗನ್ನು ಹೆಚ್ಚಿಸಿದರು.
ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ನಡೆದ ದಿನ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರ ಪ್ರತಿಷ್ಠೆಯ ವಾರ್ಷಿಕ ದಿನ ಸಲುವಾಗಿ ನಡೆದ ದೀಪೋತ್ಸವ ದುರ್ಗಾ ರಾಮೋತ್ಸವದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಕುಣಿತ ಭಜನಾ ತಂಡಗಳ ಏಳುನೂರಕ್ಕೂ ಅಧಿಕ ಮಂದಿ ಭಜಕರು ರಥಬೀದಿಯಲ್ಲಿ ಕಟೀಲು ಸಹೋದರಿಯರಾದ ಜ್ಯೋತಿ, ಅರುಣಾ, ಸಂಧ್ಯಾ ಹಾಗೂ ಸೌಮ್ಯ ಹಾಡಿದ ಭಕ್ತಿ ಸಂಗೀತಕ್ಕೆ ಕುಣಿದು ದೇವರನ್ನು ಸ್ತುತಿಸಿದರು. ತಮ್ಮ ಶ್ರದ್ಧಾಭಕ್ತಿ ಸಮರ್ಪಿಸಿ ಧನ್ಯರಾದರು.
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ವಿ.ಎ., ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ರಾಮಚಂದ್ರ ಭಟ್ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ದೀಪೋತ್ಸವ ಕುಣಿತ ಭಜನೆಗೆ ಚಾಲನೆ ನೀಡಿದರು.



ಕಟೀಲು ದೇವಳದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ದೇಗುಲದ ಅರ್ಚಕರು, ನೂರಾರು ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.